‘ನೆಮ್ಮದಿ ಮಾದರಿ’ ಯಾರಲ್ಲಿದೆ?

Update: 2019-10-08 18:27 GMT

ಚುನಾವಣೆ ಎದುರಿಸಲು ಅಭಿವೃದ್ಧಿ ಮಾದರಿ, ದೇಶಭಕ್ತಿ ಮಾದರಿ, ಗುಜರಾತ್ ಮಾದರಿ, ಹಿಂದುತ್ವದ ಮಾದರಿ ಹೀಗೆ ತರಹೇವಾರಿ ಮಾದರಿಗಳನ್ನು ಜನರ ಮುಂದಿಡುವ ರಾಜಕೀಯ ಪಕ್ಷಗಳು ‘ನೆಮ್ಮದಿ ಮಾದರಿ’ಯನ್ನೇಕೆ ನಿರ್ಲಕ್ಷಿಸುತ್ತಿವೆ? ಆಳುವವರಿಂದ ನಾವೂ ಸಹ ನೆಮ್ಮದಿಯನ್ನು ಅಪೇಕ್ಷಿಸುತ್ತಿಲ್ಲವೇ?

ಚುನಾಯಿತ ಸರಕಾರಗಳ ಕಾರ್ಯವೈಖರಿಯನ್ನು ಪರಾಮರ್ಶಿಸಲು ವಿವಿಧ ಅಂಕಿ ಅಂಶಗಳ ಮೊರೆ ಹೋಗುವ ವೇಳೆಯಲ್ಲಿಯೇ ನಮ್ಮೆಲ್ಲರ ಬದುಕಿನ ಆವರಣದಲ್ಲಿಯೇ ಕಂಡುಕೊಳ್ಳಬಹುದಾದ ನೆಮ್ಮದಿಯ ರೇಖೆಯಲ್ಲಿನ ಏರಿಳಿತವನ್ನೂ ಗಣನೆಗೆ ತೆಗೆದುಕೊಳ್ಳಬಹುದಲ್ಲವೇ?

ದೇಶದ ಪ್ರಜೆಗಳಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸುವುದು ಆಳುವವರ ಆದ್ಯತೆಯಾಗಬೇಕಲ್ಲವೇ? ನಮ್ಮೆಲ್ಲರ ಬದುಕಿನಲ್ಲಿ ನೆಮ್ಮದಿಗೆ ಭಂಗ ಉಂಟಾದರೆ, ಅದಕ್ಕೆ ಕಾರಣ ವೈಯಕ್ತಿಕ ನೆಲೆಗಟ್ಟಿನದ್ದೋ ಅಥವಾ ಸಾಮಾಜಿಕ ನೆಲೆಗಟ್ಟಿನದ್ದೋ ಎಂಬುದನ್ನು ಪರಿಶೀಲಿಸುವುದು ಸೂಕ್ತವಲ್ಲವೇ?
ಸರಕಾರವೊಂದಕ್ಕೆ ಜನರ ನೆಮ್ಮದಿಯ ಮಟ್ಟವನ್ನು ಸುಧಾರಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಇರುವ ನೆಮ್ಮದಿಯನ್ನಾದರೂ ಕಸಿದುಕೊಳ್ಳಬಾರದೆಂಬ ಪ್ರಜ್ಞೆ ಇರಬೇಕಲ್ಲವೇ? ಕಳೆದ ಐದೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತ ವೈಖರಿಯನ್ನು ಅದು ಜನರ ನೆಮ್ಮದಿಗೆ ನೀಡುತ್ತಲೇ ಬಂದಿರುವ ಪೆಟ್ಟುಗಳ ಪಟ್ಟಿ ಮುಂದಿಟ್ಟುಕೊಂಡು ಪರಾಮರ್ಶಿಸಬೇಕಿದೆ.

ಮತ್ತೊಬ್ಬರ ವಿರುದ್ಧ ಹಗೆ ಸಾಧಿಸುತ್ತ ವ್ಯಕ್ತಿಯೊಬ್ಬ ತನ್ನ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವೇ? ಇನ್ನೊಬ್ಬರನ್ನು ಅಪಹಾಸ್ಯ ಮಾಡುವ ಮೂಲಕವಾದರೂ ನೆಮ್ಮದಿ ದಕ್ಕಿಸಿಕೊಳ್ಳಬಹುದೇ? ಇಂದು ಅಧಿಕಾರದ ಚುಕ್ಕಾಣಿ ಹಿಡಿದಿರುವವರು ಮಾಡಿಕೊಂಡು ಹೋಗುತ್ತಿರುವುದು ಇದನ್ನೇ ಅಲ್ಲವೇ? ಇಂದಿನ ಅಧಿಕಾರ ಕೇಂದ್ರದ ಚಾಲಕಶಕ್ತಿಯಾಗಿರುವ ಕಾರ್ಯಸೂಚಿಗೆ ಕಟ್ಟುವುದಕ್ಕಿಂತ ಕೆಡವುದರೆಡೆಗೆ ಹೆಚ್ಚು ಗಮನವಿರುವುದು ಢಾಳಾಗಿಯೇ ಗೋಚರಿಸುತ್ತಿದೆ. ಹಾಗಾಗಿಯೇ ಅದು ಅನ್ಯ ಧರ್ಮೀಯರನ್ನು ದ್ವೇಷಿಸುವುದನ್ನು ಕಲಿಸುತ್ತದೆ, ನೆರೆಹೊರೆಯ ದೇಶಗಳನ್ನು ಶತ್ರು ರಾಷ್ಟ್ರವಾಗಿ ಕಾಣಬೇಕೆಂದು ಬಯಸುತ್ತದೆ, ಗೋಮಾಂಸ ಸೇವಿಸುವವರನ್ನು ಗೌರವಿಸಬಾರದೆನ್ನುವ ಸಂದೇಶ ರವಾನಿಸುತ್ತದೆ, ಭಿನ್ನಾಭಿಪ್ರಾಯಗಳನ್ನು ದಮನಿಸುವ ಮನಸ್ಥಿತಿಯನ್ನು ಪೋಷಿಸುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಅಂತಿಮವಾಗಿ ನಮ್ಮಿಳಗೆ ಸದಾ ಕಾಲ ಮತ್ತೊಬ್ಬರನ್ನು ದೂಷಿಸುವ ಮತ್ತು ದ್ವೇಷಿಸುವ ಮನಸ್ಥಿತಿ ಜಾಗೃತವಾಗಿರುವಂತೆ ನೋಡಿಕೊಳ್ಳುತ್ತವೆ.

ಸರಕಾರಗಳು ಕೈಗೊಳ್ಳುವ ಕ್ರಮಗಳು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸುವಂತಿದ್ದರೆ ಅದು ‘ಬಿಕ್ಕಟ್ಟಿನ ಮಾದರಿ’ಯೇ ಹೊರತು ‘ನೆಮ್ಮದಿ ಮಾದರಿ’ ಅಲ್ಲವೆಂದು ಸುಲಭವಾಗಿಯೇ ಗ್ರಹಿಸಬಹುದು. ಜನರ ವಿಶ್ವಾಸಾರ್ಹತೆ ಗಳಿಸಿಕೊಂಡಿರುವ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ವಿಶ್ವಾಸದ ಜಾಗದಲ್ಲಿ ಅನುಮಾನ ಬೇರೂರುವಂತೆ ಮಾಡುವುದು ‘ಕಟ್ಟುವ ಮಾದರಿ’ ಖಂಡಿತ ಅಲ್ಲ. ಕೆಡವುವ ಮಾದರಿ ಎಂದಿಗೂ ನೆಮ್ಮದಿಗೆ ಅಡಿಪಾಯ ಹಾಕಲಾರದು.

ಕಳೆದ ಐದೂವರೆ ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳು ಜನರ ನೆಮ್ಮದಿಯ ಮೇಲೆ ಬೀರಿರುವ ಪರಿಣಾಮ ಸಕಾರಾತ್ಮವಾದುದೋ ಅಥವಾ ನಕಾರಾತ್ಮಕವಾದುದೋ ಎಂಬುದಕ್ಕೆ ಎಲ್ಲರೂ ಅವರೊಳಗೇ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ‘‘ಯಾವ ಸರಕಾರ ಬಂದರೂ ನಮ್ಮ ಬದುಕಲ್ಲೇನು ಬದಲಾವಣೆ ಆಗಲ್ಲ’’ ಎನ್ನುವ ಧೋರಣೆ ಹೊಂದಿದ್ದ ಜನಸಾಮಾನ್ಯರಿಗೂ ಬಿಸಿ ಮುಟ್ಟಿಸುವಲ್ಲಿ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಕ್ರಮಗಳು ಯಶಸ್ವಿಯಾಗಿವೆ! ಎಷ್ಟೋ ವರ್ಷಗಳಿಂದ ನಿರ್ವಹಿಸುತ್ತ ಬಂದಿದ್ದ ಉದ್ಯೋಗಕ್ಕೂ ಕುತ್ತು ಬಂದಿದೆ, ಹಣ ಇಡಲು ಸುರಕ್ಷಿತ ತಾಣವೆಂದು ಭಾವಿಸಿದ್ದ ಬ್ಯಾಂಕ್‌ಗಳತ್ತಲೂ ಅನುಮಾನದ ಕಾರ್ಮೋಡ ಕವಿಯತೊಡಗಿದೆ.

ನಮ್ಮ ಆದ್ಯತೆಗಳು ಅದ್ಯಾವ ಪರಿ ಬದಲಾಗಿವೆ ಎಂದರೆ, ನಮ್ಮ ಒಂದು ಕೈ ಹೋದರೂ ಚಿಂತೆ ಇಲ್ಲ; ನಮಗಾಗದವರ ಎರಡೂ ಕೈ ತೆಗೆದರೆ ಅದುವೇ ಗೆಲುವು ಎಂದು ಬೀಗುವ ಮನಸ್ಥಿತಿಗೆ ನಾವು ಜೋತುಬೀಳತೊಡಗಿದ್ದೇವೆ. ಹಾಗಾಗಿಯೇ ನಮ್ಮ ದೈನಂದಿನ ಬದುಕಿಗೆ ಪೂರಕವಾಗುವ ಮೂಲಸೌಕರ್ಯಗಳನ್ನು ಒದಗಿಸಲು ವಿಫಲವಾಗುವ ಆಳುವವರನ್ನು ಪ್ರಶ್ನಿಸುವ ಬದಲಿಗೆ ಅವರು ತೋರುವ ದೂರದ ಶತ್ರುಗಳತ್ತ ಚಿತ್ತ ಹರಿಸಿ ಅವರ ತಾಳಕ್ಕೆ ತಕ್ಕಂತೆ ಕುಣಿಯುವುದೇ ನಮ್ಮ ಕರ್ತವ್ಯವೆಂದು ಭಾವಿಸತೊಡಗಿದ್ದೇವೆ. ಇಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಮೂಲಸೌಕರ್ಯ ಒದಗಿಸಲೂ ಆಗದ ಶಾಸಕರೇ ಕಾಶ್ಮೀರದ ಅಭಿವೃದ್ಧಿಯ ಹೊಣೆ ಹೊತ್ತವರಂತೆ ಮಾತನಾಡುತ್ತಾರೆ!

ನಾವು ಬದುಕುವ ಸಮಾಜದಲ್ಲಿ ಸೌಹಾರ್ದ ನೆಲೆಗೊಂಡಿದ್ದರೆ ಮಾತ್ರ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಾಧ್ಯವೆನ್ನುವ ಪ್ರಜ್ಞೆಯ ಮೇಲೆಯೇ ಅಸಹನೆಯ ಕಾರ್ಮೋಡ ಕವಿದಿದೆ. ಹಾಗಾಗಿಯೇ ನಮ್ಮ ಜೀವನಮಟ್ಟ ಸುಧಾರಿಸಲು ಇರುವ ದಾರಿಗಳ ಕುರಿತು ಚಿಂತಿಸಬೇಕಿದ್ದ ನಾವು, ಇನ್ನೊಬ್ಬರಿಗೆ ಪಾಠ ಕಲಿಸುವುದರಲ್ಲೇ ನಮ್ಮ ಪಾಲಿನ ನೆಮ್ಮದಿ ಅರಸಲು ಹೊರಟಿದ್ದೇವೆ. ಹಾಗಾಗಿಯೇ ಆಳುವವರ ಬಾಯಿಯಿಂದ ನಿರಂತರವಾಗಿ ಅವರಿವರಿಗೆ ಪಾಠ ಕಲಿಸುವ ಘೋಷಣೆಗಳೇ ಹೊರಹೊಮ್ಮುತ್ತಿವೆ. ಈ ನಡುವೆ ಕುಸಿಯುತ್ತಿರುವ ಆರ್ಥಿಕತೆಯೇ ನಮಗೆಲ್ಲ ಯಾವುದು ನಮ್ಮೆಲ್ಲರ ಆದ್ಯತೆ ಆಗಬೇಕಿತ್ತು ಎಂಬ ಪಾಠ ಬೋಧಿಸುತ್ತಿರುವಂತಿದೆ! ಈಗ ನೆಮ್ಮದಿಯ ಬದುಕಿನ ಪಾಠ ಬೋಧಿಸುವ ದನಿಗಳು ಉಡುಗಿ ಹೋಗಿವೆ ಮತ್ತು ಅಪ್ರಸ್ತುತವೇ ಆಗಿವೆ.

ಸುಳ್ಳಿಗೂ ನೆಮ್ಮದಿಗೂ ಇರುವ ಸಂಬಂಧವನ್ನು ಅರಿತರೆ, ಸುಳ್ಳಿನ ಉತ್ಪಾದನೆಯನ್ನು ಪ್ರಾಯೋಜಿಸುವ ಕಾರ್ಯಸೂಚಿ ಅಪ್ಪಿಕೊಂಡಿರುವ ಸರಕಾರದ ಅಸಲಿ ಮಾದರಿ ಯಾವುದೆನ್ನುವುದರ ಅರಿವಾಗುತ್ತದೆ.

Writer - ಎಚ್. ಕೆ. ಶರತ್, ಹಾಸನ

contributor

Editor - ಎಚ್. ಕೆ. ಶರತ್, ಹಾಸನ

contributor

Similar News