ರಾಜ್‌ನಾಥ್-ಮ್ಯಾಕ್ರೋನ್ ಮಾತುಕತೆ: ಉಭಯ ದೇಶಗಳ ನಡುವಿನ ರಕ್ಷಣಾ, ಸೇನಾ ಬಾಂಧವ್ಯಕ್ಕೆ ಒತ್ತು

Update: 2019-10-08 18:40 GMT

ಪ್ಯಾರಿಸ್, ಅ. 8: ಫ್ರಾನ್ಸ್ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಮಂಗಳವಾರ ರಾಜಧಾನಿ ಪ್ಯಾರಿಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ‌ರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಮತ್ತು ಸೇನಾ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ.,

ಮೊದಲ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸುವ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ರಾಜ್‌ನಾಥ್ ಸಿಂಗ್ ಫ್ರಾನ್ಸ್‌ನಲ್ಲಿದ್ದಾರೆ.

ಫ್ರಾನ್ಸ್ ಅಧ್ಯಕ್ಷರ ಅಧಿಕೃತ ಕಚೇರಿ ಎಲೈಸೀ ಅರಮನೆಯಲ್ಲಿ ಉಭಯ ನಾಯಕರ ಭೇಟಿ ನಡೆಯಿತು.

‘‘ನಾವು ಫ್ರಾನ್ಸ್ ಜೊತೆಗೆ ಬಹು-ಆಯಾಮಗಳ ಬಾಂಧವ್ಯವನ್ನು ಹೊಂದಿದ್ದೇವೆ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಸುತ್ತಿದೆ. ಉಭಯ ದೇಶಗಳ ನಡುವಿನ ಸಮಗ್ರ ರಕ್ಷಣಾ ಮಾತುಕತೆಯ ಭಾಗವಾಗಿ ಇಂದಿನ ಮಾತುಕತೆ ನಡೆದಿದೆ’’ ಎಂದು ಫ್ರಾನ್ಸ್‌ಗೆ ತೆರಳಿರುವ ನಿಯೋಗದ ಭಾಗವಾಗಿರುವ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದರು.

ಮ್ಯಾಕ್ರೋನ್ ಜೊತೆಗಿನ ಮಾತುಕತೆಗೂ ಮುನ್ನ ರಾಜ್‌ನಾಥ್ ಸಿಂಗ್, ಫ್ರಾನ್ಸ್‌ನ ಸಶಸ್ತ್ರ ಪಡೆಗಳ ಸಚಿವೆ ಫ್ಲಾರೆನ್ಸ್ ಪಾರ್ಲಿಯನ್ನು ಭೇಟಿಯಾಗಿ ಮಾತುಕತೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷರ ರಕ್ಷಣಾ ಸಲಹೆಗಾರ ಬೆರ್ನಾರ್ಡ್ ರೋಜಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News