22 ವರ್ಷಗಳಿಂದ ಪ್ರತ್ಯೇಕವಿದ್ದ ದಂಪತಿಯ ವಿವಾಹ ರದ್ದುಗೊಳಿಸಲು ವಿಶೇಷ ಅಧಿಕಾರ ಬಳಸಿದ ಸುಪ್ರೀಂ

Update: 2019-10-09 17:11 GMT

 ಹೊಸದಿಲ್ಲಿ, ಅ.9: 22 ವರ್ಷಗಳಿಂದ ಪ್ರತ್ಯೇಕವಾಗಿರುವ ದಂಪತಿಯ ವಿವಾಹವನ್ನು ರದ್ದುಗೊಳಿಸಲು ಸಂವಿಧಾನದ 142ನೇ ವಿಧಿಯಡಿ ತನಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಬಳಸಿರುವ ಸುಪ್ರೀಂಕೋರ್ಟ್, ಸರಿಪಡಿಸಲಾಗದ ವಿಫಲ ವಿವಾಹ ಬಂಧನದ ಪ್ರಕರಣ ಇದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಪರಸ್ಪರರ ನಡುವೆ ನಂಬಿಕೆ, ವಿಶ್ವಾಸ ಉಳಿದಿಲ್ಲದ ಕಾರಣ ವಿವಾಹ ಬಂಧನವನ್ನು ಮುಂದುವರಿಸಿಕೊಂಡು ಹೋಗುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದು, ದಂಪತಿ ಮರಳಿ ಒಂದುಗೂಡುವ ಸಾಧ್ಯತೆ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ತನಗೆ ಏಕಗಂಟಿನಲ್ಲಿ ಜೀವನಾಂಶ ಪಾವತಿಸಬೇಕೆಂಬ ಮಹಿಳೆಯ ಕೋರಿಕೆಯನ್ನು ಪರಿಗಣಿಸಿ, ಸಂವಿಧಾನದ 142ನೇ ವಿಧಿಯಡಿ ನೀಡಲಾಗಿರುವ ವಿಶೇಷ ಅಧಿಕಾರ ಬಳಸಿ ಇತ್ಯರ್ಥಗೊಳಿಸಲು ಈ ಪ್ರಕರಣ ಯೋಗ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಮತ್ತು ಎಂಆರ್ ಶಾ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಅಲ್ಲದೆ ಜೀವನಾಂಶವಾಗಿ ಪತ್ನಿಗೆ 8 ವಾರದೊಳಗೆ 20 ಲಕ್ಷ ರೂ. ಮೊತ್ತವನ್ನು ಡಿಡಿ ಮೂಲಕ ಪಾವತಿಸಲು ಸೂಚಿಸಿದೆ. 1993ರ ಮೇ 9ರಂದು ಈ ದಂಪತಿ ವಿವಾಹವಾಗಿದ್ದರು. ಆಗಸ್ಟ್ 1995ರಲ್ಲಿ ಇವರಿಗೆ ಮಗು ಹುಟ್ಟಿತ್ತು. ಆ ಬಳಿಕ ದಂಪತಿ ಮಧ್ಯೆ ವೈಮನಸ್ಸು ಮೂಡಿದ್ದು ಪತ್ನಿ ತನ್ನೊಂದಿಗೆ ಕ್ರೂರವಾಗಿ ವರ್ತಿಸುತ್ತಿದ್ದಾಳೆ. ತನ್ನನ್ನು ತೊರೆದು ತವರು ಮನೆ ಸೇರಿದ್ದು ಎಷ್ಟು ಕರೆದರೂ ಮನೆಗೆ ಬರಲು ಒಪ್ಪುತ್ತಿಲ್ಲ. ಆದ್ದರಿಂದ ತನಗೆ ವಿಚ್ಚೇದನ ಕೊಡಿಸಬೇಕು ಎಂದು ಪತಿ ಹೈದರಾಬಾದ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ಕ್ರೂರವಾಗಿ ವರ್ತಿಸುತ್ತಿದ್ದಾಳೆ ಎಂಬ ದೂರನ್ನು ಸಾಬೀತುಪಡಿಸಲು ಪತಿ ವಿಫಲವಾಗಿದ್ದಾನೆ ಎಂದು ತಿಳಿಸಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು 2003ರಲ್ಲಿ ತಳ್ಳಿ ಹಾಕಿತ್ತು.

ಇದನ್ನು ಪ್ರಶ್ನಿಸಿ ಪತಿ ಹೈದರಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ಕೂಡಾ 2012ರಲ್ಲಿ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆತ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ವಿವಾಹ ವಿಚ್ಛೇದನಕ್ಕೆ ಇಬ್ಬರೂ ಒಪ್ಪಿಗೆ ನೀಡದಿದ್ದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತನ್ನ ವಿಶೇಷ ಅಧಿಕಾರ ಬಳಸಬಹುದು. ಇಲ್ಲಿ ಪತ್ನಿ ವಿಚ್ಛೇದನಕ್ಕೆ ಒಪ್ಪುತ್ತಿಲ್ಲ, ಅಲ್ಲದೆ ಪತಿಯ ಮನೆಗೆ ಹಿಂತಿರುಗಲೂ ಒಪ್ಪುತ್ತಿಲ್ಲ. ಆದ್ದರಿಂದ ಇಬ್ಬರ ಹಿತಾಸಕ್ತಿಯನ್ನು ಪರಿಗಣಿಸಿ, ಪತ್ನಿಗೆ ಜೀವನಾಂಶ ಒದಗಿಸಿ ವಿಚ್ಛೇದನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News