ಗೌಡಹಳ್ಳಿ: ಮೂರು ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳು

Update: 2019-10-09 18:32 GMT

ಚಿಕ್ಕಮಗಳೂರು, ಅ.9: ಅತಿವೃಷ್ಟಿಯಿಂದ ಮನೆ, ಜಮೀನು, ಬೆಳೆ ಕಳೆದುಕೊಂಡಿರುವ ಮೂಡಿಗೆರೆ ತಾಲೂಕಿನ ರೈತರು ದಿಕ್ಕು ತೋಚದಂತಾಗಿದ್ದರೆ, ಈ ರೈತರ ಪಾಲಿಗೆ ಕಾಡಾನೆಗಳ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಮೂರು ದಿನಗಳಿಂದ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ರೈತರ ಹೊಲಗದ್ದೆಗಳಿಗೆ ದಾಂಗುಡಿ ಇಡುತ್ತಾ ನಾಶ ಮಾಡುತ್ತಿವೆ.

ಜಿಲ್ಲೆಯ ಮೂಡಿಗೆರೆ ತಾಲೂಕು ಕಾಡಾನೆ ಹಾವಳಿಯಿಂದ ನಲುಗಿರುವ ತಾಲೂಕಾಗಿದ್ದು, ಇಲ್ಲಿನ ಸಕಲೇಶಪುರ ಅರಣ್ಯ, ಚಾರ್ಮಾಡಿ ಘಾಟ್‍ಗೆ ಹೊಂದಿಕೊಂಡಿರುವ ಗೌಡನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಮೂರು ಕಾಡಾನೆಗಳು ದಾಳಿ ಇಟ್ಟು ಅಲ್ಲೇ ಗ್ರಾಮಕ್ಕೆ ಹೊಂದಿರಕೊಂಡಿರುವ ಕಾಡುಗಳಲ್ಲಿ ಬೀಡುಬಿಟ್ಟಿವೆ. ರಾತ್ರಿ ವೇಳೆ ಗ್ರಾಮದಲ್ಲಿರುವ ರೈತರ ಹೊಲ ಗದ್ದೆಗಳನ್ನು ಲಗ್ಗೆ ಇಡುತ್ತಿರುವ ಕಾಡಾನೆಗಳು ರೈತರು ಕಷ್ಟಪಟ್ಟು ಬೆಳೆದ ಭತ್ತದ ಗದ್ದೆ, ಕಾಫಿ, ಅಡಿಕೆ ತೋಟಗಳನ್ನು ತುಳಿದು ನಾಶ ಮಾಡಿವೆ. ಗ್ರಾಮದ ಕೆಲವೆಡೆ ಹಲುಸಾಗಿ ಬೆಳೆದು ನಿಂತಿದ್ದ ಭತ್ತದ ಪೂರುಗಳನ್ನೇ ತಿಂದು ಹಾಕಿವೆ. ಕಾಡಾನೆಗಳ ಸತತ ದಾಳಿಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರಾತ್ರಿ ವೇಳೆ ಗ್ರಾಮದ ಹೊಲ ಗದ್ದೆಗಳಿಗೆ ಲಗ್ಗೆ ಇಟ್ಟು ಜಮೀನು, ಬೆಳೆ ನಾಶ ಮಾಡುತ್ತಿರುವ ಆನೆಗಳು ಹಗಲಿನ ವೇಳೆ ಸಮೀಪದ ಕಾಡುಗಳಲ್ಲಿ ಬೀಡು ಬಿಡುತ್ತಿವೆ. ಕಾಡಾನೆಗಳ ಹಾವಳಿ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಗ್ರಾಮದತ್ತ ಇದುವರೆಗೂ ಅಧಿಕಾರಿಗಳು ತಲೆ ಹಾಕಿಲ್ಲ ಎಂದು ಸ್ಥಳೀಯರು ದೂರುತ್ತಿದ್ದು, ಆನೆಗಳನ್ನು ಓಡಿಸಲು ಗ್ರಾಮಸ್ಥರೇ ಹರಸಾಹಸ ಪಡುವಂತಾಗಿದೆ.

ಮೂರು ದಿನಗಳಿಂದ ಆನೆಗಳು ಗ್ರಾಮದ ಸಮೀಪದಲ್ಲೇ ಬೀಡು ಬಿಟ್ಟಿರುವುದರಿಂದ ರಾತ್ರಿ ವೇಳೆ ಹೊಲ ಗದ್ದೆಗಳಲ್ಲಿ ತಿರುಗಾಡುವ ರೈತರ ಮೇಲೆ ದಾಳಿ ಮಾಡು ಭೀತಿಯಿಂದ ಗ್ರಾಮಸ್ಥರು ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳುವಂತಹ ಆತಂಕದ ವಾತಾವರಣೆ ನಿರ್ಮಾಣವಾಗಿದೆ. ಅಧಿಕಾರಿಗಳು ಕೂಡಲೇ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕೆಂದು ಗೌಡಹಳ್ಳಿ ನಿವಾಸಿಗಳು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News