ದಶಮಂಟಪಗಳ ಶೋಭಾಯಾತ್ರೆ: ದಂಡಿನ ಮಾರಿಯಮ್ಮ ಪ್ರಥಮ

Update: 2019-10-09 18:41 GMT

ಮಡಿಕೇರಿ,ಅ.9 :  ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಬನ್ನಿ ಕಡಿಯುವ ಮೂಲಕ ಬುಧವಾರ ಮುಂಜಾನೆ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ  ತೆರೆ ಎಳೆಯಲಾಯಿತು.

ಮಂಗಳವಾರ ರಾತ್ರಿ ದಟ್ಟ ಮಂಜು ಕವಿದ ವಾತಾವರಣದ ನಡುವೆಯೇ ನಗರದ ಹತ್ತು ದೇವಾಲಯಗಳಿಂದ ಹೊರಟ ಚಲನವಲನಗಳನ್ನೊಳಗೊಂಡ ಮಂಟಪಗಳು ಮಡಿಕೇರಿಯ ರಾಜಬೀದಿಯಲ್ಲಿ ಸಾಗಿ ಬರುವ ಮೂಲಕ ದಸರಾ ಜನೋತ್ಸವದ ಅಂತಿಮ ದಿನಕ್ಕೆ ಮೆರಗನ್ನು ನೀಡಿದವು.

ಚುಮುಚುಮು ಚಳಿಯ ನಡುವೆಯೇ ಸಾವಿರಾರು ಮಂದಿ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಡಿಜೆ, ಬ್ಯಾಂಡ್, ವಾಲಗದ ನಾದಕ್ಕೆ ಕುಣಿದು ಕುಪ್ಪಳಿಸುವುದರೊಂದಿಗೆ ಮಡಿಕೇರಿ ದಸರಾದ ಸವಿಯನ್ನು ಅನುಭವಿಸಿತು.

ದಶಮಂಟಪಗಳ ಶೋಭಾಯಾತ್ರೆಯಲ್ಲಿ ನಗರದ ಶ್ರೀದಂಡಿನ ಮಾರಿಯಮ್ಮ ದೇವಾಲಯದ ಮಂಟಪ ಪ್ರಥಮ ಸ್ಥಾನ ಪಡೆದರೆ, ಕುಂದುಮೊಟ್ಟೆ ಶ್ರೀಚೌಟಿ ಮಾರಿಯಮ್ಮ ದೇವಾಲಯದ ಮಂಟಪ ದ್ವಿತೀಯ ಹಾಗೂ ಕೋಟೆ ಶ್ರೀಮಹಾಗಣಪತಿ ದಸರಾ ಸಮಿತಿಯ ಮಂಟಪ ತೃತೀಯ ಬಹುಮಾನ ಪಡೆಯಿತು. 

ಶ್ರೀದಂಡಿನ ಮಾರಿಯಮ್ಮ ದೇವಾಲಯ: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಹಾಗೂ ಈ ಬಾರಿ ದಶಮಂಟಪ ಸಮಿತಿಯ ಜವಾಬ್ದಾರಿ ಹೊತ್ತಿದ್ದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ‘ನರಸಿಂಹನಿಂದ ಹಿರಣ್ಯ ಕಶಿಪುವಿನ ವಧೆ’ ಕಥಾ ಸಾರಾಂಶವನ್ನು ಹೊಂದಿರುವ ಎಂಟು ಚಲನಶೀಲ ಕಲಾಕೃತಿಗಳನ್ನು ಮಂಟಪದಲ್ಲಿ ಅಳವಡಿಸಿತ್ತು. 

ಎರಡು ಟ್ರ್ಯಾಕ್ಟರ್‍ಗಳಲ್ಲಿ ಅಳವಡಿಸಲಾಗಿದ್ದ ಕಲಾಕೃತಿಗಳಿಗೆ ದಿಂಡಿಗಲ್‍ನ ಎಂ.ಪಿ. ಲೈಟಿಂಗ್ಸ್‍ನವರು ದೀಪಾಲಂಕಾರ ಮಾಡಿದ್ದರು.  ಹುದಬೂರಿನ ಕಲಾವಿದ ಮಹದೇವಪ್ಪ ಅಂಡ್ ಸನ್ಸ್ ಅವರ ಕೈಚಳಕದಿಂದ ತಯಾರಾದ ಕಲಾಕೃತಿಗಳಿಗೆ ಮಡಿಕೇರಿಯ ಸುಬ್ರಮಣಿ ಮತ್ತು ತಂಡ ಪ್ಲಾಟ್‍ಫಾರಂ ಒದಗಿಸಿದರೆ, ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಮಡಿಕೇರಿ ಆರಾಧನ ಆಟ್ರ್ಸ್‍ನ ಆನಂದ್ ತಂಡ ಮತ್ತು ಕಲಾಕೃತಿಗಳ ಚಲನವಲವನ್ನು  ದಿನೇಶ್ ನಾಯರ್ ಮತ್ತು ತಂಡ ನಿರ್ವಹಿಸಿತು.  ಪೂಕೋಡ್‍ನ ಜಾಲಿ ತಂಡದ ವಾದ್ಯಗೋಷ್ಠಿ, ಮಡಿಕೇರಿಯ ಸ್ಕಂದ ಡೆಕೋರೇಟರ್ಸ್‍ನ ಅನಿಲ್ ಮತ್ತು ತಂಡದವರು ಧ್ವನಿವರ್ಧಕ ಫೈರ್ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ನಿರ್ಮಿಸಲಾಗಿತ್ತು.

ಶ್ರೀ ಚೌಟಿ ಮಾರಿಯಮ್ಮ ದೇವಾಲಯ: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯ ಅಕ್ಕಳೆಂದೇ ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ ದಸರಾ ಸಮಿತಿಯು ಈ ಬಾರಿ  ‘ಸುಬ್ರಮಣ್ಯನಿಂದ ತಾರಕಾಸುರನ ವಧೆ’ ಎಂಬ ಕಥಾ ಸಾರಾಂಶವನ್ನು ಹೊಂದಿದ ಮಂಟಪವನ್ನು ಹೊರಡಿಸಿತ್ತು.

ಎರಡು ಟ್ರ್ಯಾಕ್ಟರ್‍ಗಳಲ್ಲಿ 22 ಕಲಾಕೃತಿಗಳನ್ನು ಅಳವಡಿಸಿದ್ದರೆ, ದಿಂಡಿಗಲ್‍ನ ನ್ಯೂಮಾತಾ ಎಲೆಕ್ಟ್ರಿಕಲ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಿದ್ದರು.  ಧ್ವನಿವರ್ಧಕವನ್ನು ಬೆಂಗಳೂರಿನ ಈವೆಂಟ್ ಟೆಕ್ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ಅನ್ನು ಮಡಿಕೇರಿಯ ಸತ್ಯಪ್ರೋ ಸೌಂಡ್‍ನ ಅವಿನ್ ಕುಮಾರ್ ಹಾಗೂ ಬೆಂಗಳೂರಿನ ಈವೆಂಟ್ ಟೆಕ್ ಸಂಸ್ಥೆ ನಿರ್ವಹಿಸಿತು. ಫ್ಲಾಟ್ ಫಾರಂನ್ನು ಸಮಿತಿಯ ಸದಸ್ಯ ಪದ್ಮನಾಭ ಮತ್ತು ತಂಡ ನಿರ್ಮಿಸಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ಸ್‍ನ್ನು ಕಲಾಸಾಗರದ ಎಂ.ವಿ.  ಮಂಜುನಾಥ್ ಮತ್ತು   ಕಲಾಕೃತಿಗಳ ಅಲಂಕಾರವನ್ನು ಖಾದರ್ ನಿರ್ದೇಶನದಲ್ಲಿ ಸಮಿತಿಯ  ಸದಸ್ಯರಾದ ಶಿವರಾಂ, ಪದ್ದು ಹಾಗೂ ಚುಮ್ಮ ನಿರ್ವಹಿಸಿದ್ದರು. ಕಲಾಕೃತಿಗಳಿಗೆ ಚಲನ ವಲನವನ್ನು ದೀಕ್ಷಾ ಫ್ಯಾಭ್ರಿಕೇಶನ್ ತಂಡ ನೀಡಿದ್ದು, ಬೆಂಗಳೂರಿನ ಆರ್.ಜೆ.ಫೈರ್ ಟೆಕ್ ಸಂಸ್ಥೆ ಆಕರ್ಷಕ ಫೈರ್ ಎಫೆಕ್ಟ್ ನೀಡಿತ್ತು. ಒಟ್ಟು 16 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗಿದ್ದು, ನಾಸಿಕ್ ಬ್ಯಾಂಡ್ ಮಂಟಪವನ್ನು ಮುನ್ನಡೆಸಿತು.  

ಶ್ರೀ ಕೋಟೆ ಮಹಾ ಗಣಪತಿ ದೇವಾಲಯ: ನಗರದ ಶ್ರೀ ಕೋಟೆ ಮಹಾ ಗಣಪತಿ ದೇವಾಲಯ ದಸರಾ ಮಂಟಪ ಸಮಿತಿ   ಈ ಬಾರಿ ಶ್ರೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾದ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿತ್ತು.  ಮಡಿಕೇರಿಯ ನಜೀರ್ ಪೂಜಾ ಪೈಟಿಂಗ್ಸ್ ಬೋರ್ಡ್ ಅಳವಡಿಸಿದ್ದು, ಕಥಾ ನಿರ್ವಹಣೆಯನ್ನು ಆರ್.ಬಿ. ರವಿ ನಿರ್ವಹಿಸಿದರು. ಲೋಕೇಶ್ ಫ್ಯೂಚರ್ ಈವೆಂಟ್ಸ್ ಸ್ಟುಡಿಯೋ ಸೆಟ್ಟಿಂಗ್ಸ್ ಮತ್ತು ಸೌಂಡ್ಸ್ ಒದಗಿಸಿತ್ತು.   23  ಕಲಾಕೃತಿಗಳ ಚಲನ-ವಲನ ವ್ಯವಸ್ಥೆಯನ್ನು ಮಡಿಕೇರಿಯ ಹೊನ್ನಪ್ಪ ಮತ್ತು ಸುರೇಶ್, ಸಿದ್ದಪ್ಪಾಜಿ ಕ್ರಿಯೇಷನ್ಸ್ ನಿರ್ವಹಿಸಿತು. ಸುಮಾರು 19.5 ಲಕ್ಷ ವೆಚ್ಚದಲ್ಲಿ ಮಂಟಪವನ್ನು ರಚಿಸಲಾಗಿತ್ತು.   

ಈ ಬಾರಿಯ ಶೋಭಾಯಾತ್ರೆಯಲ್ಲಿ ಪ್ರಥಮ ಸ್ಥಾನ ಪಡೆದ  ಮಂಟಪಕ್ಕೆ 20 ಗ್ರಾಂ ಚಿನ್ನ, ದ್ವಿತೀಯ ಸ್ಥಾನ ಪಡೆಯುವ ಮಂಟಪಕ್ಕೆ 14 ಗ್ರಾಂ ಚಿನ್ನ, ತೃತೀಯ ಸ್ಥಾನ ಪಡೆಯುವ ಮಂಟಪಕ್ಕೆ 10ಗ್ರಾಂ ಚಿನ್ನ ಹಾಗೂ ಉಳಿದ ಮಂಟಪಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ಬಹುಮಾನ ಅಸಮಾಧಾನ
ಪ್ರತೀ ವರ್ಷದಂತೆ ಈ ಬಾರಿಯೂ ಬಹುಮಾನ ಘೋಷಣೆಯಲ್ಲಿ ತಾರತಮ್ಯ ನಡೆದಿರುವುದಾಗಿ ಕೆಲವು ಮಂಟಪ ಸಮಿತಿಗಳು  ದಶಮಂಟಪ ಸಮಿತಿ ಹಾಗೂ ತೀರ್ಪುಗಾರರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
 ಬಹುಮಾನ ವಿತರಣೆ ಸಂದರ್ಭ ಶ್ರೀಕೋಟೆ ಮಾರಿಯಮ್ಮ ಸಮಿತಿಯ ಪದಾಧಿಕಾರಿಗಳು ದಶಮಂಟಪ ಸಮಿತಿ ಮತ್ತು ದಸರಾ ಸಮಿತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಪರಿಸ್ಥಿತಿ ಶಾಂತವಾಯಿತು.

ಬುಧವಾರ ಬೆಳಗ್ಗೆ ನಡೆದ ಸಮಾರೋಪ ಸಮಾರಂಭದಲ್ಲಿ ದಸರಾ ಸಮಿತಿ ಪದಾಧಿಕಾರಿಗಳು ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News