ದೇಶದ ನಾಲ್ಕು ಕೋಟಿ ಹಿರಿಯ ನಾಗರಿಕರು ಆತಂಕದಲ್ಲಿ: ಕಾರಣ ಏನು ಗೊತ್ತೇ ?

Update: 2019-10-10 03:52 GMT

ಮುಂಬೈ: ದೇಶದಲ್ಲಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ನಿಯತವಾಗಿ ಕುಸಿಯುತ್ತಿರುವುದು, ಇದನ್ನೇ ಆದಾಯದ ಪ್ರಮುಖ ಮೂಲವಾಗಿ ಹೊಂದಿರುವ ಹಿರಿಯ ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಹಿರಿಯ ನಾಗರಿಕರು ಪ್ರಮುಖವಾಗಿ ಬ್ಯಾಂಕ್‍ಗಳಲ್ಲಿ ಇರಿಸಿದ ಠೇವಣಿಗಳಿಗೆ ಬರುವ ಬಡ್ಡಿಯನ್ನೇ ಆದಾಯ ಮೂಲವಾಗಿ ಹೊಂದಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಜೀವಿತಾವಧಿಯ ಉಳಿತಾಯದ ಒಂದು ಭಾಗವನ್ನು ಮ್ಯೂಚುವಲ್ ಫಂಡ್‍ನಲ್ಲಿ ಹೂಡಿಕೆ ಮಾಡುವ ಅಗತ್ಯತೆ ಇದೆ ಎನ್ನುವುದು ತಜ್ಞರ ಅಭಿಮತ.

ಬುಧವಾರ ಸಾಲದ ಮೇಲಿನ ಬಡ್ಡಿದರವನ್ನು ಉಳಿಸುವ ಜತೆಗೆ ಪ್ರಮುಖ ಬ್ಯಾಂಕ್ ಆದ ಎಸ್‍ಬಿಐ, 11 ಲಕ್ಷ ರೂಪಾಯಿವರೆಗಿನ ಹಿರಿಯ ನಾಗರಿಕರ ಠೇವಣಿಗಳ ಮೇಲಿನ ಬಡ್ಡಿದರವನ್ನು ಕೂಡಾ ಶೇಕಡ 7 ರಿಂದ 6.9ಕ್ಕೆ ಇಳಿಸಿದೆ. ಉಳಿತಾಯ ಖಾತೆ ಮೇಲಿನ ಬಡ್ಡಿದರ 3.5 ಶೇಕಡದಿಂದ 3.25ಕ್ಕೆ ಕುಸಿದಿದೆ. ಇತರ ಬ್ಯಾಂಕ್‍ಗಳು ಕೂಡಾ ಇದನ್ನೇ ಅನುಸರಿಸುವ ಸಾಧ್ಯತೆ ಇದೆ.

ಪ್ರಸ್ತುತ ವ್ಯವಸ್ಥೆಯಡಿ ಪ್ರಗತಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಆರ್‍ಬಿಐ ರೆಪೊ ದರವನ್ನು ಕಡಿತಗೊಳಿಸಿದ ತಕ್ಷಣ ನಿಶ್ಚಿತ ಠೇವಣಿ ದರ ಕೂಡಾ ಕುಸಿಯುತ್ತದೆ. ಇದು ತಮ್ಮ ಹಣಕಾಸು ಅಗತ್ಯತೆಗಳಿಗೆ ಬಡ್ಡಿ ಆದಾಯವನ್ನೇ ನಂಬಿರುವ ಹಿರಿಯ ನಾಗರಿಕರಿಗೆ ಹೊಡೆತ ನೀಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ತಮ್ಮ ಉಳಿತಾಯದ ಒಂದು ಭಾಗವನ್ನು ಡೆಟ್ ಫಂಡ್‍ನಂಥ ಮಾರುಕಟ್ಟೆ ಉತ್ಪನ್ನಗಳಿಗೆ ಹೂಡಿಕೆ ಮಾಡುವುದು ಅಗತ್ಯ ಎನ್ನುವುದು ತಜ್ಞರ ಅನಿಸಿಕೆ.

ಪರ್ಯಾಯವಾಗಿ ಸರ್ಕಾರ ಹಿರಿಯ ನಾಗರಿಕರಿಗೆ ತೆರಿಗೆ ರಿಯಾಯಿತಿ ನೀಡಿ ಈ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಎಸ್‍ಬಿಐನ ಅಧ್ಯಯನ ವರದಿಯೊಂದು ಸಲಹೆ ನೀಡಿದೆ. ಹಿರಿಯ ನಾಗರಿಕರ 15 ಲಕ್ಷ ರೂಪಾಯಿವರೆಗಿನ ಠೇವಣಿಗೆ ತೆರಿಗೆ ರಿಯಾಯಿತಿ ನೀಡುವಂತೆ ಸಲಹೆ ಮಾಡಲಾಗಿದೆ. ಎಸ್‍ಬಿಐ ವರದಿಯ ಪ್ರಕಾರ 4.1 ಕೋಟಿ ಹಿರಿಯ ನಾಗರಿಕರು ಸುಮಾರು 14 ಲಕ್ಷ ಕೋಟಿ ರೂಪಾಯಿ ಠೇವಣಿ ಇಟ್ಟಿದ್ದಾರೆ. ಬಡ್ಡಿದರ ಕುಸಿದ ತಕ್ಷಣ ಹಿರಿಯ ನಾಗರಿಕರಿಗೆ ಹೊಡೆತ ಬೀಳುತ್ತದೆ ಎನ್ನುವುದನ್ನು ವರದಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News