ಮಾಜಿ ಡಿಸಿಎಂ ಜಿ.ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

Update: 2019-10-10 12:00 GMT

ತುಮಕೂರು, ಅ.10: ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳು, ನಿವಾಸ, ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆ ಇಂದು ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‍ನ ಪ್ರಭಾವಿ ಮುಖಂಡರಾಗಿರುವ ಡಾ.ಜಿ.ಪರಮೇಶ್ವರ್ ಒಡೆತನದ ತುಮಕೂರಿನ ಕುಣಿಗಲ್ ರಸ್ತೆಯ ಮರಳೂರು ದಿಣ್ಣೆಯಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದಲ್ಲಿರುವ ವೈದ್ಯಕೀಯ ಕಾಲೇಜು, ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸ, ಕಚೇರಿ ಹಾಗೂ ಸಹೋದರ ಒಡೆತನದ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ.

100ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ, ದಾಳಿ ಸಂದರ್ಭದಲ್ಲಿ ಕಾಲೇಜಿನಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಐಟಿ ಅಧಿಕಾರಿಗಳು ಹೊರಗೆ ಕಳುಹಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ಸಂದೇಹಾಸ್ಪದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಪರಮೇಶ್ವರ್ ಆಪ್ತ ರಿಯಲ್ ಎಸ್ಟೇಟ್ ಉದ್ಯಮಿ ರಂಗನಾಥ ಎಂಬುವರ ಮನೆ ಹಾಗೂ ಕಚೇರಿ ಮೇಲೂ ಐಟಿ ದಾಳಿ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬೇಗೂರು ಎಂಬಲ್ಲಿ ಐಟಿ ಅಧಿಕಾರಿಗಳ ಮೂರು ತಂಡ ರಂಗನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಪರಮೇಶ್ವರ್ ಅವರ ಆಪ್ತವಲ ಯದಲ್ಲಿ ರಂಗನಾಥ್ ಗುರುತಿಸಿಕೊಂಡಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಜಿ.ಪರಮೇಶ್ವರ್ ಅವರು, ಐಟಿ ಅಧಿಕಾರಿಗಳು ದಾಳಿ ಮಾಡಿದರೆ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ತಪ್ಪು ಇದ್ದರೆ ತಿಳಿಸಲಿ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

'ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ನಾನೇಕೆ ಐಟಿ ದಾಳಿಯ ಬಗ್ಗೆ ಹೆದರಲಿ. ಅವರ ಕೆಲಸಗಳನ್ನು ಮಾಡಿಕೊಳಲಿ ಬಿಡಿ. ಸಿದ್ಧಾರ್ಥ್ ಹೆಸರಿನ ಎಲ್ಲಾ ಸಂಸ್ಥೆಗಳ ವ್ಯವಹಾರವೂ ಕಾನೂನು ಪ್ರಕಾರವೇ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ರೀತಿಯ ಸಂದೇಹವಿಲ್ಲ. ಎರಡು ಮೆಡಿಕಲ್ ಕಾಲೇಜುಗಳಿವೆ. ಅವುಗಳು ಕೂಡ ಸೂಸೂತ್ರವಾಗಿ ನಡೆಯುತ್ತಿವೆ. ಇತರೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಇದರ ಬಗ್ಗೆ ಐಟಿ ದಾಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ಐಟಿಯವರನ್ನು ನೀವೇಕೆ ದಾಳಿ ಮಾಡಿದಿರಿ ಎಂದು ಕೇಳಲು ಸಾಧ್ಯವೆ? ಅದು ಅವರ ಕೆಲಸ. ಅವರ ತನಿಖೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಐಟಿಯವರು ಕಾಲೇಜು, ಮನೆ ಎಲ್ಲವನ್ನೂ ಅವರು ದಾಳಿ ಮಾಡಿ ಪರಿಶೀಲನೆ ನಡೆಸಲಿ. ನಮ್ಮದೇನು ಅಭ್ಯಂತರವಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News