ರಾಕೇಶ್ ಅಸ್ತಾನ ಲಂಚ ಪ್ರಕರಣ: ತನಿಖೆ ಪೂರ್ಣಗೊಳಿಸಲು ಸಿಬಿಐಗೆ 2 ತಿಂಗಳು ಕಾಲಾವಕಾಶ

Update: 2019-10-10 05:18 GMT

ಹೊಸದಿಲ್ಲಿ, ಅ. 10: ಸಿಬಿಐಯ ಆಗಿನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಭಾಗಿಯಾಗಿದ್ದಾರೆ ಎಂದು ಹೇಳಲಾದ ಲಂಚ ಪ್ರಕರಣದ ತನಿಖೆ ಪೂರ್ಣಗೊಳಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಸಿಬಿಐಗೆ ಬುಧವಾರ ಎರಡು ತಿಂಗಳ ಕಾಲಾವಕಾಶ ನೀಡಿದೆ.

ಪ್ರಕರಣದ ತನಿಖೆ ಪೂರ್ಣಗೊಳಿಸಲು ಹೆಚ್ಚುವರಿ ಸಮಯ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿಭು ಬಖ್ರು ಸಿಬಿಐಗೆ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಳಿಸಲು ಗಡುವನ್ನು 6 ತಿಂಗಳು ವಿಸ್ತರಿಸಬೇಕು ಎಂದು ಕೋರಿದ ಸಿಬಿಐ ಮನವಿಯನ್ನು ವಿಲೇವಾರಿ ಮಾಡಿ ಉಚ್ಚ ನ್ಯಾಯಾಲಯ ಈ ಆದೇಶ ನೀಡಿದೆ.

 ಸಿಬಿಐಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್‌ಜಿತ್ ಬ್ಯಾನರ್ಜಿ, ಅಮೆರಿಕ ಹಾಗೂ ಯುಎಇಗೆ ನ್ಯಾಯಾಲಯದ ಮೂಲಕ ಪತ್ರ ಕಳುಹಿಸಲಾಗಿದೆ. ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ. ಇದರಿಂದ ತನಿಖೆ ಪೂರ್ಣಗೊಂಡಿಲ್ಲ ಎಂದರು. ಈ ಮನವಿಗೆ ಪ್ರಕರಣದ ಮೂವರು ಆರೋಪಿಗಳಾದ ಅಸ್ತಾನ, ಡಿಎಸ್‌ಪಿ ದೇವೇಂದರ್ ಕುಮಾರ್ ಹಾಗೂ ಉದ್ಯಮಿ ಮನೋಜ್ ಪ್ರಸಾದ್ ಪರ ವಕೀಲ ವಿರೋಧ ವ್ಯಕ್ತಪಡಿಸಿದರು.

 ಭ್ರಷ್ಟಾಚಾರ ತಡೆ ಕಾಯ್ದೆಯ ಸಂಬಂಧಿತ ಕಲಂ ಅಡಿಯಲ್ಲಿ ಅಸ್ತಾನ ವಿರುದ್ಧ ಕ್ರಿಮಿನಲ್ ಪಿತೂರಿ ಭ್ರಷ್ಟಾಚಾರ ಹಾಗೂ ಕ್ರಿಮಿಲ್ ದುರ್ನಡತೆ ಆರೋಪ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News