ಈಗ ಟೊಮೆಟೊ ಬೆಲೆ ಏರಿಕೆಯ ಸರದಿ: ದಿಲ್ಲಿಯಲ್ಲಿ ಕಿ.ಗ್ರಾಂಗೆ 80 ರೂ.

Update: 2019-10-10 05:23 GMT

ಹೊಸದಿಲ್ಲಿ, ಅ.10: ಈರುಳ್ಳಿ ಬೆಲೆ ಏರಿಕೆಯ ಬಳಿಕ ಇದೀಗ ಟೊಮೆಟೊ ಬೆಲೆ ಏರಿಕೆಯ ಸರದಿ. ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪೂರೈಕೆಗೆ ಅಡಚಣೆಯಾಗಿದ್ದು ದಿಲ್ಲಿಯಲ್ಲಿ ಬುಧವಾರ ಟೊಮೆಟೊ ಬೆಲೆ ಕಿ.ಗ್ರಾಂಗೆ 80 ರೂ. ಆಗಿತ್ತು.

 ಈ ಮಧ್ಯೆ, ಕಳೆದ ವಾರ ಭಾರೀ ಏರಿಕೆ ಕಂಡಿದ್ದ ಈರುಳ್ಳಿಯ ಬೆಲೆ ಈ ವಾರ ಸ್ವಲ್ಪ ಇಳಿಮುಖವಾಗಿದ್ದು ರಾಷ್ಟ್ರೀಯ ರಾಜಧಾನಿಯಲ್ಲಿ ಕಿ.ಗ್ರಾಂಗೆ 60 ರೂ. ದರದಲ್ಲಿ ಮಾರಾಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಸಹಿತ ಈರುಳ್ಳಿ ಬೆಳೆಯುವ ಕೆಲವು ಪ್ರಮುಖ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಟೊಮೆಟೊ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಸ್ಥಳೀಯ ಮಾರಾಟಗಾರರು ಕಿ.ಗ್ರಾಂಗೆ 60ರಿಂದ 80 ರೂ. ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ದಿಲ್ಲಿಯಲ್ಲಿ ಅಕ್ಟೋಬರ್ 1ರಂದು ಕಿ.ಗ್ರಾಂಗೆ 45 ರೂ. ಇದ್ದ ಟೊಮೆಟೊ ಬೆಲೆ ಬುಧವಾರ(ಅ.9) 54 ರೂ.ಗೆ ತಲುಪಿದೆ . ಕೋಲ್ಕತಾದಲ್ಲಿ ಟೊಮೆಟೊ ಬೆಲೆ ಕಿ.ಗ್ರಾಂಗೆ 60 ರೂ, ಮುಂಬೈಯಲ್ಲಿ 54 ರೂ, ಚೆನ್ನೈಯಲ್ಲಿ 40 ರೂ.ಗೆ ಹೆಚ್ಚಿದೆ ಎಂದು ಸರಕಾರ ತಿಳಿಸಿದೆ.

ಈ ಮಧ್ಯೆ ಪೂರೈಕೆ ಹೆಚ್ಚಿದ ಕಾರಣ ದಿಲ್ಲಿಯಲ್ಲಿ ಈರುಳ್ಳಿ ದರ ಕಿ.ಗ್ರಾಂಗೆ 60 ರೂ.ಗಿಂತಲೂ ಕೆಳಗಿಳಿದಿದೆ. ಜೊತೆಗೆ, ಸಹಕಾರಿ ಸಂಸ್ಥೆಗಳಾದ ನಾಫೆಡ್, ಎನ್‌ಸಿಸಿಎಫ್, ಮದರ್ ಡೈರಿಗಳ ಮೂಲಕ ಈರುಳ್ಳಿಯನ್ನು ಕಿ.ಗ್ರಾಂಗೆ 23.90 ರೂ. ದರದಲ್ಲಿ ಸರಕಾರ ಮಾರಾಟ ಮಾಡುತ್ತಿದೆ. ಈರುಳ್ಳಿ ದರ ನಿಯಂತ್ರಣದ ಕ್ರಮವಾಗಿ ಗೋದಾಮಿನಲ್ಲಿರುವ 56,700 ಟನ್ ಈರುಳ್ಳಿ ಸಂಗ್ರಹದಿಂದ ತುರ್ತಾಗಿ 18000 ಟನ್ ಈರುಳ್ಳಿಯನ್ನು ಸರಕಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News