ವಿದ್ಯುತ್ ತಂತಿ ಸ್ಪರ್ಶಿಸಿ ಪೌರ ಕಾರ್ಮಿಕ ಸ್ಥಳದಲ್ಲೇ ಮೃತ್ಯು

Update: 2019-10-10 08:58 GMT

ತುಮಕೂರು,ಅ.10: ವಿಜಯದಶಮಿ ಹಾಗೂ ಆಯುಧಪೂಜಾ ಸಂಬಂಧ ನಗರದ ವಿವಿಧೆಡೆಗಳಲ್ಲಿ ಕಟ್ಟಿದ್ದ ಪ್ಲೆಕ್ಸ್ ಮತ್ತು ಬ್ಯಾನರ್ ತೆರವುಗೊಳಿಸುವ ವೇಳೆ ವಿದ್ಯುತ್ ಪ್ರಹರಿಸಿ ಪೌರಕಾರ್ಮಿಕನೊರ್ವ ಮೃತಪಟ್ಟಿರುವ ಘಟನೆ ಇಂದು ತುಮಕೂರು ನಗರದಲ್ಲಿ ನಡೆದಿದೆ. 

ಮೃತ ಪೌರಕಾರ್ಮಿಕರನನ್ನು ನರಸಿಂಹಮೂರ್ತಿ (29) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಹಬ್ಬದ ಪ್ರಯುಕ್ತ ನಗರದ ಟೌನ್‍ಹಾಲ್ ವೃತ್ತಕ್ಕೆ ಹೊಂದಿಕೊಂಡಂತೆ, ಗ್ರಂಥಾಲಯದ ಮುಂಭಾಗದಲ್ಲಿರುವ ಪಾದಚಾರಿ ಮೇಲ್ಸೇತುವೆ ಹಾಗೂ ಅಕ್ಕಪಕ್ಕದಲ್ಲಿದ್ದ ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳು ಪೌರಕಾರ್ಮಿಕರಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಎಂದಿನಂತೆ ಸ್ವಚ್ಚತಾ ಕೆಲಸಕ್ಕೆ ಹಾಜರಾಗಿದ್ದ ನರಸಿಂಹಮೂರ್ತಿ ವಿದ್ಯುತ್ ಕಂಬವನ್ನು ಆಧಾರವಾಗಿಸಿಕೊಂಡು ಕಟ್ಟಿದ್ದ ಪ್ಲೆಕ್ಸ್ವೊಂದನ್ನು ಕಬ್ಬಿಣದ ಹುಕ್‍ನಿಂದ ತೆರವುಗೊಳಿಸುವ ವೇಳೆ ಮಳೆಯಿಂದ ನೆನೆದಿದ್ದ ಮರದ ತುಂಡು ವಿದ್ಯುತ್‍ಗೆ ಸ್ಪರ್ಶಿಸಿ, ಪೌರಕಾರ್ಮಿಕ ನರಸಿಂಹಮೂರ್ತಿಗೆ ವಿದ್ಯುತ್ ಪ್ರಹರಿಸಿ, ಹಿಮ್ಮುಖವಾಗಿ ಕೆಳಗೆ ಬಿದಿದ್ದು, ಈ ವೇಳೆ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಪಾಲಿಕೆಯ ಮೇಯರ್ ಶ್ರೀಮತಿ ಲಲಿತಾ ರವೀಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ ಕುಮಾರ್, ಪ್ರಭಾರ ಆಯುಕ್ತರಾದ ಯೋಗಾನಂದ ಅವರುಗಳು ಮೃತರ ಕುಟುಂಬದವರಿಗೆ ಪಾಲಿಕೆಯಲ್ಲಿ ಉದ್ಯೋಗ ನೀಡುವುದರೊಂದಿಗೆ, ಕುಟುಂಬಕ್ಕೆ ಒಂದು ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News