ಜೆಡಿಎಸ್ ಶಾಸಕರ ಅನುದಾನ ಹಿಂಪಡೆದ ಆರೋಪ: ಸರಕಾರದ ಕ್ರಮ ಖಂಡಿಸಿ ಪ್ರತಿಭಟನೆ

Update: 2019-10-10 11:41 GMT

ಹಾಸನ: ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ ಹಾಗೂ ಜೆಡಿಎಸ್ ಶಾಸಕರ ಅನುದಾನವನ್ನು ಹಿಂಪಡೆದಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಸರಕಾರದ ಕ್ರಮವನ್ನು ವಿರೋಧಿಸಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಲಾಯಿತು. ನಂತರ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ತೆರಳಿದ ಪ್ರತಿಭಟನಾಕಾರರು, ಕಳೆದ ಮೂರು ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ರಾಜ್ಯ ತತ್ತರಿಸಿದೆ. ಆದರೆ ನೆರೆ ಸಂತ್ರಸ್ತರಿಗೆ ರಾಜ್ಯ ಸರಕಾರ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. 

ಹಾಸನ ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಬೀಳುವ ಅಂತದಲ್ಲಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಶಾಲಾ ಕಟ್ಟಡ ಬಿದ್ದು ಮಕ್ಕಳಿಗೆ ತೊಂದರೆ ಉಂಟಾದರೇ ರಾಜ್ಯ ಸರಕಾರವೇ ನೇರ ಹೊಣೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನೂರಾರು ರಸ್ತೆಗಳು ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಹಿಂದಿನ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ನೀಡಿದ ಅನುದಾನವನ್ನು ಇಂದಿನ ಬಿಜೆಪಿ ಸರಕಾರವು ಎಲ್ಲಾ ಕಾಮಗಾರಿಯನ್ನು ಕೈಬಿಡಲು ಆದೇಶಿಸಿದೆ. ದ್ವೇಷ ಮತ್ತು ಹಗೆತನ ಬೀರುವ ಕಾರ್ಯದಲ್ಲಿ ಬಿಜೆಪಿ ಸರಕಾರ ತೊಡಗಿರುವುದು ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ರೈತರಿಗೆ ಹಾಗೂ ನೆರೆ ಸಂತ್ರಸ್ತರಿಗೆ ಸಂಪೂರ್ಣ ಪ್ರಮಾಣದ ಪರಿಹಾರವನ್ನು ತುರ್ತಾಗಿ ಕೂಡಲೇ ವಿತರಣೆ ಮಾಡಬೇಕು. ಹಾಸನ ಜಿಲ್ಲೆಯ ಜೆಡಿಎಸ್ ಶಾಸಕರ ಕ್ಷೇತ್ರಗಳ ಹಿಂಪಡೆದಿರುವ ಅನುದಾನವನ್ನು ತುರ್ತಾಗಿ ರಾಜ್ಯ ಬಿಜೆಪಿ ಸರಕಾರ ನೀಡಬೇಕೆಂದು ಒತ್ತಾಯಿಸಿದರು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‍ರವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಮಾಜಿ ಶಾಸಕ ಬಿ.ವಿ. ಕರೀಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್, ದಿ. ಸಿಟಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಗಿರೀಶ್ ಚನ್ನವೀರಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷ ನಿಂಗೇಗೌಡ, ಎಪಿಎಂಸಿ ಹಾಗೂ ಹೆಚ್.ಡಿ.ಸಿ.ಸಿ. ಬ್ಯಾಂಕಿನ ಬಿದರಿಕೆರೆ ಜಯರಾಂ, ಲಕ್ಷ್ಮಣ್, ಜಾವಗಲ್ ರಾಜಶೇಖರ್, ಅಗಿಲೆ ಗ್ರಾಮ ಪಂಚಾಯತ್ ಸದಸ್ಯ ನವೀನ್ ಕುಮಾರ್, ರೈತ ಸಂಘದ ಮುಖಂಡ ಶಾಂತಿಗ್ರಾಮದ ಸುರೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಸಯ್ಯಾದ್ ಅಕ್ಬರ್, ಮಾಜಿ ಸದಸ್ಯ ಹೆಚ್.ಬಿ. ಗೋಪಾಲ್, ಸಯ್ಯಾದ್ ಅನ್ಸಾರ್, ಗಿರೀಶ್, ಚಿಕ್ಕಕೊಂಡಗುಳದ ಸೋಮಶೇಖರ್, ಪ್ರೇಮಮ್ಮ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News