ಮಡಿಕೇರಿ ಪಿಎಲ್‍ಡಿ ಬ್ಯಾಂಕ್‍ಗೆ ಸತತ ಎರಡನೇ ಬಾರಿಗೆ ರಾಜ್ಯ ಪ್ರಶಸ್ತಿ

Update: 2019-10-10 12:15 GMT

ಮಡಿಕೇರಿ ಅ.10: 2018-19ನೇ ಸಾಲಿನಲ್ಲಿ 204.27 ಲಕ್ಷ ರೂ.ಗಳಷ್ಟು ಲಾಭ ಗಳಿಸಿರುವ ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ಸರ್ವಾಂಗೀಣ ಪ್ರಗತಿಗಾಗಿ ಸತತ ಎರಡನೇ ಬಾರಿಗೆ ರಾಜ್ಯ ಮಟ್ಟದ ಪ್ರಥಮ ಪುರಸ್ಕಾರ ಮತ್ತು ವಸೂಲಾತಿಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ನಿರಂತರ ಸಂಪರ್ಕ ಮತ್ತು ಬ್ಯಾಂಕ್ ವ್ಯವಸ್ಥಾಪಕರ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯ ನಿರ್ವಹಣೆಯಿಂದ ಈ ಸಾಧನೆ ಸಾಧ್ಯವಾಗಿದೆ. ಹೆಚ್ಚಿನ ಸಾಲ ವಸೂಲಾತಿ, ಸಾಲ ವಿತರಣೆ, ಸ್ವಂತ ಬಂಡವಾಳದ ಪ್ರಗತಿ, ಕಡಿಮೆ ಪ್ರಮಾಣದ ಅನುತ್ಪಾದಕ ಆಸ್ತಿ ಹಾಗೂ ‘ಎ’ ತರಗತಿ ಆಡಿಟ್ ಶ್ರೇಣಿಗೆ ಬಂದಿರುವುದರಿಂದ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ ಎಂದರು.

ಇದೇ ಸೆ.25 ರಂದು ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸಲಾಗಿದೆ. ರಾಜ್ಯದ ಒಟ್ಟು 178 ಪಿಎಲ್‍ಡಿ ಬ್ಯಾಂಕ್‍ಗಳಲ್ಲಿ ಎರಡನೇ ಬಾರಿಗೆ ಮಡಿಕೇರಿ ಪಿಎಲ್‍ಡಿ ಬ್ಯಾಂಕ್ ಪ್ರಥಮ ಪ್ರಶಸ್ತಿ ಪಡೆದಿರುವುದು ಅತ್ಯಂತ ಹರ್ಷ ದಾಯಕವೆಂದರು.

2019 ಮಾ.31 ರ ಅಂತ್ಯಕ್ಕೆ ರಾಜ್ಯ ಬ್ಯಾಂಕಿನಿಂದ ತಂದ ಸಾಲ 851.27ಲಕ್ಷ ರೂ.ಗಳಿದ್ದು, ಸದಸ್ಯರಿಂದ ಬ್ಯಾಂಕಿಗೆ 981.79 ಲಕ್ಷ ಬರಬೇಕಾಗಿರುತ್ತದೆ. ಬ್ಯಾಂಕಿನ ಇತರೆ ಸಂಪನ್ಮೂಲಗಳಿಂದ 130.52 ಲಕ್ಷ ರೂ. ಹೆಚ್ಚುವರಿ ಪಾವತಿಸಿದ್ದು, ಇದರಿಂದ 14.51 ಲಕ್ಷ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಇದ್ದರೂ ಕಾಫಿ , ಕಾಳು ಮೆಣಸು ಮತ್ತು ಅಡಿಕೆ ಇಳುವರಿ ಕುಸಿತವಾಗಿದ್ದರು ಬ್ಯಾಂಕಿನ ಮೇಲಿನ ಅಭಿಮಾನದಿಂದ ಕೃಷಿಕ ವರ್ಗ ಸಾಲವನ್ನು ಮರು ಪಾವತಿಸಿದ್ದರಿಂದ ಮತ್ತು ಸಿಬ್ಬಂದಿ ವರ್ಗದ ನಿಷ್ಟಾವಂತ ಸೇವೆಯಿಂದ ಬ್ಯಾಂಕ್ ಈ ಸಾಧನೆ ಮಾಡಿದೆಯೆಂದು ಮನುಮುತ್ತಪ್ಪ ಹೇಳಿದರು. 2017-18ನೇ ಸಾಲಿನ ಮಹಾಸಭೆಯ ತೀರ್ಮಾನದಂತೆ ಸದಸ್ಯರ ಡಿವಿಡೆಂಡನ್ನು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶದ ಸಾಲಗಾರರಿಗೆ ವಿತರಣೆ ಮಾಡಲಾಗಿದೆ. ಬ್ಯಾಂಕ್‍ನ ಸ್ವಂತ ಬಂಡವಾಳ ಯೋಜನೆಯಿಂದ ಮಕ್ಕಳ ವಿದ್ಯಾಭ್ಯಾಸ, ವಿವಾಹ, ತುರ್ತು ಅವಶ್ಯಕತೆಗಳಿಗೆ ಸಾಲ ಮತ್ತಿತರ ಉದ್ದೇಶಗಳಿಗೆ ಸಾಲ ಸೌಲಭ್ಯ ನೀಡಿ ಸದಸ್ಯರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. 

ಪ್ರತಿ ವರ್ಷ ಮಾ.31ರ ಒಳಗೆ ಸಾಲ ಮರುಪಾವತಿಸುವ ರೈತರಿಗೆ ಗರಿಷ್ಠ ಪ್ರಮಾಣ ತಲಾ 5 ಸಾವಿರ ರೂ.ಗಳನ್ನು ನೀಡಲಾಗುತ್ತಿದ್ದು, ಇದು ದೇಶದಲ್ಲೆ ಪ್ರಥಮವೆಂದು ಮನು ಮುತ್ತಪ್ಪ ತಿಳಿಸಿದರು.

1957 ರಲ್ಲಿ 25 ಸದಸ್ಯರಿಂದ ಆರಂಭಗೊಂಡ ಬ್ಯಾಂಕ್ ಇಂದು 2092 ಸದಸ್ಯರನ್ನು ಒಳಗೊಂಡಂತೆ 101.96 ಲಕ್ಷ ಷೇರು ಬಂಡವಾಳವನ್ನು ಹೊಂದಿರುತ್ತದೆ. 2005ರವರೆಗೆ ಕೆಲವು ವರ್ಷಗಳನ್ನು ಬಿಟ್ಟು ನಿರಂತರವಾಗಿ ನಷ್ಟದಲ್ಲಿದ್ದ ಬ್ಯಾಂಕ್ 2006-07 ರಿಂದ ಸತತ ಲಾಭದತ್ತ ಮುನ್ನುಗ್ಗುತ್ತಿದೆ. 2018-19ನೇ ಸಾಲಿನಲ್ಲಿ ನಿವ್ವಳ ಲಾಭ 20.13 ಲಕ್ಷ ರೂ. ಆಗಿದೆ. ಸರ್ಕಾರದಿಂದ ಬರಬೇಕಾದ ಶೇ.3, 4 ಮತ್ತು 6ರ ಬಡ್ಡಿ 93.14 ಲಕ್ಷ ರೂ.ಗಳನ್ನು ಲಾಭಕ್ಕೆ ತೆಗೆದುಕೊಂಡಿರುವುದಿಲ್ಲ. 91 ಲಕ್ಷ ರೂ.ವನ್ನು ಕೆಟ್ಟ ಮತ್ತು ಸಂಶಯಾಸ್ಪದ ಸಾಲಕ್ಕೆ ಲಾಭದಲ್ಲಿ ಕಾಯ್ದಿರಿಸಲಾಗಿದೆ ಎಂದು ಮನುಮುತ್ತಪ್ಪ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಎಂ.ಪಿ. ಮುತ್ತಪ್ಪ, ಕುಂಡ್ಯೋಳಂಡ ಮುದ್ದಯ್ಯ, ಹೆಚ್.ಆರ್.ವಾಸಪ್ಪ, ನಿವೃತ್ತ ವ್ಯವಸ್ಥಾಪಕ ಎನ್.ಎಸ್.ಬಾಲಗಂಗಾಧರ ಹಾಗೂ ಹಾಲಿ ವ್ಯವಸ್ಥಾಪಕ ಟಿ.ಎ.ಚಂದ್ರಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News