ಕಲಾಪ ನೇರಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಖಂಡನೀಯ: ಜನವಾದಿ ಮಹಿಳಾ ಸಂಘಟನೆ

Update: 2019-10-10 12:48 GMT

ಮಂಡ್ಯ, ಅ.10: ವಿಧಾನಮಂಡಲದ ಕಲಾಪಗಳನ್ನು ನೇರವಾಗಿ ವರದಿ ಮಾಡಲು ಕನ್ನಡ ಸುದ್ದಿ ವಾಹಿನಿಗಳಿಗೆ ಹಾಗು ಮುದ್ರಣ ಮಾಧ್ಯಮದ ಛಾಯಾಗ್ರಾಹಕರಿಗೆ ನಿರ್ಬಂಧ ಹೇರಿರುವುದನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಜಿಲ್ಲಾಧ್ಯಕ್ಷೆ ಶೋಭಾ ಹಾಗು ಪ್ರಧಾನ ಕಾರ್ಯದರ್ಶಿ ಸುಶೀಲಾ ಖಂಡಿಸಿದ್ದಾರೆ.

ಇದು ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಹಾಗು ಜನರ ತಿಳಿಯುವ ಹಕ್ಕನ್ನು ಕಸಿದುಕೊಳ್ಳುವ ಗಂಭೀರ ಕ್ರಮವಾಗಿದೆ. ಜನರ ಸ್ಪಷ್ಟ ಬೆಂಬಲ ಇಲ್ಲದೆ, ಅಕ್ರಮವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಈ ಕ್ರಮ ಕೈಗೊಂಡಿರುವಂತೆ ಕಾಣುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಆಡಳಿತದ ಪಾರದರ್ಶಕತೆ ಅತ್ಯಂತ ಮಹತ್ವದ ಸಂಗತಿಗಳು. ಒಂದೇ ಒಂದು ಆದೇಶದ ಮೂಲಕ ಈ ಎರಡೂ ಹಕ್ಕುಗಳನ್ನು ಮೊಟಕುಗೊಳಿಸುವ ಬಿಜೆಪಿ ಸರಕಾರದ ಕ್ರಮವು ಆತಂತಕಕಾರಿಯಾಗಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಜನವಿರೋಧಿ ಕ್ರಮಗಳನ್ನು ಜನತೆಯೂ ವಿರೋಧಿಸದೆ, ಮೌನವಾಗಿ ಸ್ವೀಕರಿಸುತ್ತಿರುವ ಕಾರಣ, ಈ ಅಕ್ರಮ ಸರಕಾರವು ಜನರ ತಿಳಿಯುವ ಹಕ್ಕಿಗೇ ಕೊಡಲಿ ಪೆಟ್ಟು ಹಾಕಿದೆ. ನಮ್ಮಿಂದ ಆಯ್ಕೆಯಾದ ಶಾಸಕರು ಸದನದಲ್ಲಿ ಚರ್ಚೆ ಮಾಡದೆ, ಸಂವಾದ ಮಾಡದೆ, ಪ್ರಶ್ನೆ ಕೇಳದೆ ಸುಮ್ಮನೆ ನಿದ್ದೆ ಮಾಡಿದರೂ, ಮೊಬೈಲ್‍ನಲ್ಲಿ ಕಾಲ ಕಳೆದರೂ, ಹರಟೆ ಹೊಡೆದರೂ ಹಾಗು ಸದನಕ್ಕೆ ಗೈರು ಹಾಜರಾದರೂ ಯಾರಿಗೂ ತಿಳಿಯದಂತೆ ಮಾಡುವುದು ಈ ಆದೇಶದ ಉದ್ದೇಶವಾಗಿದೆ ಎಂದು ಅವರು ದೂರಿದ್ದಾರೆ.

ಈ ಹಿಂದೆಯೂ 2012ರಲ್ಲಿ ಇದೇ ಬಿಜೆಪಿಯ ಸರಕಾರವು ವಿಧಾನಮಂಡಲದ ವರದಿಗಾರಿಕೆಯ ಮೇಲೆ ನಿರ್ಬಂಧವನ್ನು ಹೇರಿತ್ತು. ಬಿಜೆಪಿಯ ಶಾಸಕರು ಸದನದಲ್ಲಿ ಕುಳಿತು ಲೈಂಗಿಕ ವಿಡಿಯೋಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿದ್ದುದನ್ನು ಖಾಸಗಿ ಚಾನೆಲ್‍ಗಳು ಜನರಿಗೆ ತೋರಿಸಿದ್ದವು ಎನ್ನುವ ಕಾರಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆನಂತರ ವಿಪಕ್ಷಗಳು ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದು ನಿರ್ಬಂಧವನ್ನು ಹಿಂತೆಗೆದುಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ. 

ಅಂದು ಲೈಂಗಿಕ ವಿಡಿಯೋ ನೋಡಿದ ಶಾಸಕರನ್ನು ಇಂದು ಉಪಮುಖ್ಯಮಂತ್ರಿಯ ಸ್ಥಾನಕ್ಕೆ ಏರಿಸಿರುವ ಬಿಜೆಪಿಯ ಕ್ರಮಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಜಾಪ್ರಭುತ್ವ ವಿರೋಧಿಯೂ, ಜನ ವಿರೋಧಿಯೂ ಆಗಿರುವ ಸೂಚನೆಗಳು ಈ ಆದೇಶದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ವಿಧಾನಸಭೆ ಸಚಿವಾಲಯವು ಈ ಕೂಡಲೇ ಈ ಮಾಧ್ಯಮ ನಿಬರ್ಂಧದ ಆದೇಶವನ್ನು ಹಿಂತೆಗೆದುಕೊಂಡು ಪತ್ರಿಕಾ ಸ್ವಾತಂತ್ರ್ಯವನ್ನು ಹಾಗು ಜನರ ತಿಳಿಯುವ ಹಕ್ಕನ್ನು ಎತ್ತಿಹಿಡಿಯಬೇಕು. ಆಡಳಿತದಲ್ಲಿ ಹೆಚ್ಚಿನ ಪಾರರ್ದರ್ಶಕತೆ ತೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News