ಜನರ ಆಕ್ರೋಶ ಎದುರಿಸಲಾಗದೆ ಸರಕಾರ ಪಲಾಯನ ಮಾಡಿದೆ: ಸಿದ್ದರಾಮಯ್ಯ

Update: 2019-10-10 14:24 GMT

ಬೆಂಗಳೂರು, ಅ.10: ಪ್ರತಿವರ್ಷ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಸಂಪ್ರದಾಯ. ನೆರೆ ಸಂತ್ರಸ್ತರ ಬಗ್ಗೆ ಸುವರ್ಣ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದರೆ ಹೆಚ್ಚಿನ ಮಹತ್ವ ಇರುತ್ತಿತ್ತು. ಆದರೆ, ಸರಕಾರ ಜನರ ಆಕ್ರೋಶ ಎದುರಿಸುವ ಆತಂಕದಿಂದ ಪಲಾಯನ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭಗೊಂಡ ಬಳಿಕ ನೆರೆ ಪರಿಸ್ಥಿತಿ ಕುರಿತು ಚರ್ಚೆ ಆರಂಭಿಸಿದ ಅವರು, ನಮ್ಮ ಸರಕಾರ ಆಡಳಿತದಲ್ಲಿದ್ದಾಗಲೂ ರೈತರು, ಕಬ್ಬು ಬೆಳೆಗಾರರು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ನಾವು ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೆವು ಎಂದರು.

ಬೆಳಗಾವಿಯಲ್ಲಿ ಅಧಿವೇಶನ ನಡೆದರೆ ಆ ಭಾಗದ ಜನರಲ್ಲಿ ಆತ್ಮಸ್ಥೈರ್ಯ ತುಂಬಿದಂತಾಗುತ್ತಿತ್ತು. ಯಾವ ಕಾರಣಕ್ಕಾಗಿ ಸರಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿಲ್ಲ ಅನ್ನೋದು ನನಗೆ ಈ ಕ್ಷಣದವರೆಗೆ ಅರ್ಥವಾಗುತ್ತಿಲ್ಲ. ಬಹುಷಃ ಅವರಿಗೆ ನೆರೆ ಸಂತ್ರಸ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೇನೋ ಎಂಬ ಆತಂಕ ಕಾಡುತ್ತಿರಬೇಕು ಎಂದು ಸಿದ್ದರಾಮಯ್ಯ ಟೀಕಿಸಿದರು.

ಈ ಹಿಂದೆ ಸರಕಾರವೇ 10 ದಿನ ಅಧಿವೇಶನ ನಡೆಸುವುದಾಗಿ ಸಚಿವ ಸಂಪುಟದಲ್ಲಿ ಚರ್ಚಿಸಿ ಅಧಿಸೂಚನೆ ಹೊರಡಿಸಿತು. ಅ.22ರಂದು ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೂರು ದಿನಗಳಿಗೆ ಇಳಿಸಿದರು. ಆದರೆ, ಈಗ ಉಪ ಚುನಾವಣೆಯನ್ನು ಡಿಸೆಂಬರ್ 5ಕ್ಕೆ ನಿಗದಿಗೊಳಿಸಲಾಗಿದೆ. ಧನ ವಿನಿಯೋಗ ವಿಧೇಯಕ ಅನುಮೋದನೆ ಪಡೆಯಲು ಅಕ್ಟೋಬರ್ 30ರವರೆಗೆ ಕಾಲಾವಕಾಶವಿದೆ. ಆದರೂ, ತರಾತುರಿಯ ಅಧಿವೇಶನ ನಡೆಸುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.

ಸಮ್ಮಿಶ್ರ ಸರಕಾರ ಮಂಡಿಸಿರುವ ಬಜೆಟ್‌ಗೆ ಅನುಮೋದನೆ ಕೊಡಲು ನಾವು ವಿರೋಧ ಮಾಡುವುದಿಲ್ಲ. ಆದರೆ, ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲು ಕನಿಷ್ಠ ಮೂರು ದಿನ ಬೇಕು. ಆನಂತರ, ಪ್ರಮುಖ ಇಲಾಖೆಗಳ ಬೇಡಿಕೆಗಳ ಮೇಲಿನ ಚರ್ಚೆ ನಡೆಯಬೇಕು. ಯಾವ ಯಾವ ಇಲಾಖೆಗಳಲ್ಲಿ ಭ್ರಷ್ಟ್ರಾಚಾರ ನಡೆದಿದೆ, ಹಣ ಸೋರಿಕೆಯಾಗುತ್ತಿದೆ ಎಂಬ ಅಂಶಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

2.34 ಲಕ್ಷ ಕೋಟಿ ರೂ.ಗಳ ಬೃಹತ್ ಗಾತ್ರದ ಬಜೆಟ್. ಸರಕಾರಕ್ಕೆ ಎಷ್ಟೇ ಬಹುಮತವಿದ್ದರೂ ಈ ಸದನದ ಒಪ್ಪಿಗೆ ಇಲ್ಲದೇ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಈ ಸರಕಾರಕ್ಕೆ ಬಹುಮತವು ಇಲ್ಲ. ಈಗ ಉಪ ಚುನಾವಣೆ ಇಲ್ಲ. ಆದುದರಿಂದ, ಸರಕಾರಕ್ಕೆ ಅಧಿವೇಶನವನ್ನು ವಿಸ್ತರಿಸಲು ಇರುವ ಅಡೆತಡೆ ಯಾವುದು ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News