ಸ್ವಾತಂತ್ರ್ಯ ನಂತರ ತನ್ನ ರಾಜ್ಯವನ್ನು ಸರಕಾರದ ಜೊತೆ ವಿಲೀನಗೊಳಿಸಿದ ಪ್ರಥಮ ರಾಜ ಜಯಚಾಮರಾಜ ಒಡೆಯರ್

Update: 2019-10-10 16:03 GMT

ಮೈಸೂರು,ಅ.10: ಸ್ವಾತಂತ್ರ್ಯ ನಂತರ ತನ್ನ ರಾಜ್ಯವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತವನ್ನು ಒಪ್ಪಿಕೊಂಡು ಸರಕಾರದ ಜೊತೆ ವಿಲೀನ ಗೊಳಿಸಿದ ಭಾರತ ದೇಶದ ಪ್ರಥಮ ರಾಜ ಜಯಚಾಮರಾಜ ಒಡೆಯರ್ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಣ್ಣಿಸಿದರು.

ಅರಮನೆಯಲ್ಲಿ ಗುರುವಾರ ಜಯಚಾಮರಾಜ ಒಡೆಯರ್ ಅವರ ನೂರನೆ ವರ್ಷಾಚರಣೆಯ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ತನ್ನ ರಾಜ್ಯವನ್ನು ಸರಕಾರದ ಜೊತೆ ವಿಲೀನ ಗೊಳಿಸಿದ ಪ್ರಥಮ ರಾಜ ಜಯಚಾಮರಾಜ ಒಡೆಯರ್, ಸ್ವಾತಂತ್ರ್ಯ ನಂತರ ತನ್ನ ರಾಜ್ಯವನ್ನು ಸರಕಾರದ ಜೊತೆ ವಿಲೀನಗೊಳಿಸಿದರು ಎಂದು ಹೇಳಿದರು.

ಜಯಚಾಮರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದ್ದು, ಸರಕಾರಕ್ಕೆ ತಮ್ಮ ಆಡಳಿತದಲ್ಲಿದ್ದ ಹಲವಾರು ಸ್ಥಳಗಳನ್ನು ದಾನವಾಗಿ ನೀಡಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಮೈಸೂರಿನ ಸಿ.ಎಫ್.ಟಿ.ಆರ್.ಐ ಮತ್ತು ಬೆಂಗಳೂರಿನ ಎಚ್‍ಎಎಲ್ ಅನ್ನು ಅವರು ಸರಕಾರಕ್ಕೆ ನೀಡಿದರು ಎಂದು ಹೇಳಿದರು.

ಮಹಾತ್ಮಾ ಗಾಂಧೀಜಿ ಸಹ ಜಯಚಾಮರಾಜ ಒಡೆಯರ್ ಅವರ ಆಡಳಿತ ಮತ್ತು ಅವರಿಗಿದ್ದ ದೂರದೃಷ್ಟಿಯನ್ನು ಹಾಡಿ ಹೊಗಳಿದ್ದಾರೆ. ನಮ್ಮ ದೇಶದ ಹಿಂದಿನ ಅಧ್ಯಕ್ಷರಾಗಿದ್ದ ರಾಧಕೃಷ್ಣನ್ ಅವರು ಜಯಚಾಮರಾಜ ಒಡೆಯರ್ ಸಾದಕ್ ಮತ್ತು ಆರಾಧಕ ರಾಗಿದ್ದರು ಎಂದು ಹೇಳಿದ್ದಾರೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪ ಕಟ್ಟಿಸಿ ಮಾದರಿಯಾದರು. ನಂತರ ಜಯಚಾಮರಾಜ ಒಡೆಯರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದ್ದವರಲ್ಲಿ ಮೊದಲಿಗರು ಎಂದು ಹೇಳಿದರು.

ಜಯಚಾಮರಾಜ ಒಡೆಯರ್ ಉತ್ತಮ ಆಡಳಿತ ನೀಡಿದ್ದಲ್ಲದೆ. ಸಂಗೀತ, ಕಲೆ, ಸಂಸ್ಕೃತಿ ಮತ್ತು ನಾಟಕದ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದರು. ಅವರು ಒಬ್ಬ ಕಲಾ ರಸಿಕರಾಗಿದ್ದರು ಎಂದು ಹೇಳಿದರು.

ಜಯಚಾಮರಾಜ ಒಡೆಯರ್ ಅವರ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ನಡೆದರೆ ಅದೇ ಅವರಿಗೆ ನಾವು ನೀಡುವ ಕೊಡುಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರ ಪತ್ನಿ, ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ, ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‍ಕುಮಾರ್, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News