ಕಳಸ: ಅತಿವೃಷ್ಟಿಯಿಂದ ಹಾನಿಯಾದ ನಿರ್ಮಾಣ ಹಂತದ ಮನೆ- ಇನ್ನೂ ಪರಿಹಾರ ನೀಡದ ಜಿಲ್ಲಾಡಳಿತ

Update: 2019-10-10 16:46 GMT

ಚಿಕ್ಕಮಗಳೂರು, ಅ.10: ಗ್ರಾಮ ಪಂಚಾಯತ್‍ನಿಂದ ಮಂಜೂರಾದ ಮನೆಯೊಂದು ಪೂರ್ಣಗೊಳ್ಳುವ ಹಂತದಲ್ಲಿ ಅತಿವೃಷ್ಟಿಯಿಂದಾಗಿ ಮನೆಯ ಹಿಂಬದಿಯ ಧರೆ ಕುಸಿದು ಮನೆಗೆ ಹಾನಿಯಾಗಿದ್ದು, ಹಾನಿಗೊಳಗಾದ ಮನೆಗೆ ಸೂಕ್ತ ಪರಿಹಾರವೂ ದೊರಕದೇ, ಮನೆಯನ್ನೂ ಪೂರ್ಣಗೊಳಿಸಲಾಗದೇ ಬಡ ಕುಟುಂಬವೊಂದು ದಿಕ್ಕುತೋಚದೇ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದ ಸಮೀಪದಲ್ಲಿರುವ ನೆಲ್ಲಿಕೆರೆ ಗ್ರಾಮದಲ್ಲಿ ವರದಿಯಾಗಿದೆ.

ಕಳಸ ಪಟ್ಟಣದ ನೆಲ್ಲಿಕೆರೆ ನಿವಾಸಿಯಾಗಿರುವ ರಾಜು ಎಂಬವರ ಕುಟುಂಬ ನಿರ್ಮಾಣ ಹಂತದ ಮನೆ ಅತಿವೃಷ್ಟಿಯಿಂದ ಹಾನಿಯಾಗಿರುವುದರಿಂದ ಸರಕಾರದ ಪರಿಹಾರಕ್ಕಾಗಿ ಪ್ರತಿದಿನ ಗ್ರಾಪಂ, ಕಂದಾಯಾಧಿಕಾರಿಗಳ ಬಳಿಗೆ ಅಲೆಯುತ್ತಿದ್ದು, ಸರಕಾರದ ಪರಿಹಾರವೂ ಸಿಗದೇ, ಮನೆಯನ್ನೂ ಪೂರ್ಣಗೊಳಿಸಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಮರುಕಲು ಗುಡಿಸಲೊಂದರಲ್ಲಿ ದಿನ ಕಳೆಯುತ್ತಿದೆ.

ನೆಲ್ಲಿಕೆರೆ ಗ್ರಾಮದ ರಾಜು ಕುಟುಂಬಕ್ಕೆ ಕಳಸ ಗ್ರಾಮ ಪಂಚಾಯತ್‍ನಿಂದ ಈ ಹಿಂದೆ ಆಶ್ರಯ ಮನೆ ಮಂಜೂರಾಗಿತ್ತು. ನೆಲ್ಲಿಕೆರೆ ಗ್ರಾಮದ ಕಳಸ-ಬಾಳೆಹೊನ್ನೂರು ರಸ್ತೆಯ ಬದಿಯಲ್ಲಿರುವ ನಿವೇಶನದಲ್ಲಿ ಗ್ರಾಮಪಂಚಾಯತ್‍ನಿಂದ ಮಂಜೂರಾಗಿರುವ ಮನೆ ನಿರ್ಮಾಣ ಕಾಮಗಾರಿಯನ್ನು ರಾಜು ಅವರು ಕಳೆದೊಂದು ವರ್ಷದಿಂದ ಮಾಡುತ್ತಿದ್ದು, ಮನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡು ಮನೆಯ ಮಾಡು ಹಾಗೂ ಗಾರೆ ಕೆಲಸ ಮಾತ್ರ ಬಾಕಿ ಇತ್ತು. ಆದರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಯ ಹಿಂಬದಿಯ ಧರೆ ಕುಸಿದು ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಮನೆಯ ಗೋಡೆಗಳು ನೆಲ್ಲಕ್ಕುರಳಿದ ಪರಿಣಾಮ ರಾಜು ಕುಟುಂಬ ಸುಸಜ್ಜಿತ ಮನೆಯ ಕನಸಿಗೆ ತಣ್ಣೀರೆರಚಿದಂತಾಗಿದೆ.

ರಾಜು ಕುಟುಂಬದವರು ಕೂಲಿ ಕಾರ್ಮಿಕರಾಗಿದ್ದು, ಈ ಮನೆಯನ್ನು ನಿರ್ಮಿಸಲು ಸರಕಾರದ ಒಂದೂವರೆ ಲಕ್ಷ ಹಣವಲ್ಲದೇ ಖಾಸಗಿ ಸಾಲದ ಸಂಸ್ಥೆಗಳಿಂದ ಹಾಗೂ ಕೈ ಸಾಲದ ರೂಪದಲ್ಲಿ ಸುಮಾರು 4 ಲಕ್ಷ ರೂ. ಸಾಲ ಪಡೆದು ಅದೆಲ್ಲವನ್ನೂ ಮನೆ ಕೆಲಸಕ್ಕೇ ಸುರಿದು ಸುಂದರ ಮನೆ ನಿರ್ಮಿಸಿಕೊಳ್ಳುವ ಕನಸು ಕಂಡಿದ್ದಾರೆ. ಆದರೆ ವರ್ಷವಿಡಿ ಬೆವರು ಸುರಿಸಿ ನಿರ್ಮಿಸಿದ ಮನೆ ಒಂದೇ ದಿನ ಸುರಿದ ಮಹಾಮಳೆಯಿಂದಾಗಿ ಹಾನಿಗೀಡಾಗಿದೆ.

ಮನೆಗೆ ಹಾನಿಯಾಗಿದ್ದರಿಂದ ಗ್ರಾಪಂ ಹಾಗೂ ಕಳಸ ನಾಡಕಚೇರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರ ಫಲವಾಗಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿ ಹೋದವರು ಮತ್ತೆ ಈ ಬಡ ಕುಟುಂಬದವತ್ತ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ತಿರುಗಿಯೂ ನೋಡಿಲ್ಲ ಎಂದು ಆರೋಪಿಸಲಾಗಿದ್ದು, ಮನೆಗೆ ಹಾನಿಯಾಗಿ 2 ತಿಂಗಳು ಕಳೆದರೂ ಈ ಬಡ ಕುಟುಂಬದವರಿಗೆ ಸರಕಾರ ಅಥವಾ ಗ್ರಾಮ ಪಂಚಾಯತ್‍ನಿಂದ ನಯಾ ಪೈಸೆಯೂ ಸಿಕ್ಕಿಲ್ಲ ಎನ್ನಲಾಗಿದೆ.

ನಿರ್ಮಾಣ ಹಂತದ ಮನೆಗೆ ಅತಿವೃಷ್ಟಿಯಿಂದ ಹಾನಿಯಾಗಿದ್ದರೂ ರಾಜು ಅವರು, ಕಳಸ ಪಟ್ಟಣದಲ್ಲಿ ಆರಂಭಿಸಲಾಗಿದ್ದ ಗಂಜಿಕೇಂದ್ರಕ್ಕೂ ಹೋಗದೇ ತನ್ನ ಪತ್ನಿ, ಮಕ್ಕಳೊಂದಿಗೆ ಸಮೀಪದಲ್ಲಿದ್ದ ತಾಯಿಯ ಕೋಳಿಗೂಡಿನಂತಹ ಮನೆಯಲ್ಲೇ ಆರು ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಸರಕಾರ ಬಾಡಿಗೆ ಮನೆಯಲ್ಲಿರಲು ತಿಂಗಳಿಗೆ 5 ಸಾವಿರ ರೂ. ನೀಡಲಾಗುತ್ತಿದೆ ಎನ್ನುತ್ತಿದೆಯಾದರೂ ರಾಜು ಕುಟುಂಬಕ್ಕೆ ಈ ಸೌಲಭ್ಯ ಇದುವರೆಗೂ ದೊರಕಿಲ್ಲ ಎನ್ನಲಾಗಿದ್ದು, ರಾಜು ಕುಟುಂಬ ಸದ್ಯ ವಾಸವಿರುವ ಗುಡಿಸಲಿನಂತಹ ಮನೆಯಲ್ಲಿ ಶೌಚಾಲಯ, ಸ್ನಾನಗೃಹವೂ ಇಲ್ಲದೇ ಇದಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾದ ಅನಿವಾರ್ಯ ಸಂಕಟಕ್ಕೊಳಗಾಗಿದೆ. ಇದರಿಂದ ಮನೆಯಲ್ಲಿರುವ ಹೆಣ್ಣು ಮಕ್ಕಳು ಇದರಿಂದಾಗಿ ತೀವ್ರ ಮುಜುಗರ ಅನುಭವಿಸುವಂತಾಗಿದೆ.

ಇನ್ನು ಭೂ ಕುಸಿತದಿಂದಾಗಿ ಮನೆಯ ಹಿಂಬದಿಯ ಧರೆಯು ಜಾರಿ ಬಂದ ಪರಿಣಾಮ ಮನೆಯ ಮೇಲ್ಭಾಗದಲ್ಲಿರುವ ಮಾವಿನಕೆರೆ ಎಸ್ಟೆಟ್ ಸಂಪರ್ಕಿಸುವ ರಸ್ತೆಯೂ ಕುಸಿಯುವ ಅಪಾಯ ಎದುರಾಗಿದೆ. ಅಲ್ಲದೇ ಈ ಮನೆ ನಿರ್ಮಿಸಿದ್ದರಿಂದಲೇ ರಸ್ತೆ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ರಾಜು ಕುಟುಂಬದವರನ್ನು ಜರಿಯುತ್ತಿರುವುದರಿಂದ ಕುಟುಂಬಸ್ಥರು ಮಾನಸಿಕವಾಗಿ ಖಿನ್ನತೆಗೊಳಗಾಗುವಂತಾಗಿದೆ. ಮತ್ತೊಂದೆಡೆ ಮನೆ ನಿರ್ಮಾಣಕ್ಕೆಂದು ಸಾಲ ಪಡೆದಿದ್ದ ಖಾಸಗಿ ಸಾಲದ ಸಂಸ್ಥೆಗಳು ಪ್ರತಿದಿನ ಸಾಲ ಮರುಪಾವತಿಸುವಂತೆ ಕುಟುಂಬಸ್ಥರ ಮೇಲೆ ಒತ್ತಡ ಹೇರುತ್ತಿದ್ದು, ಭಾರೀ ಮಳೆಯಿಂದಾಗಿ ಈ ಭಾಗದಲ್ಲಿ ಕೂಲಿ ಕೆಲಸವೂ ಸಿಗದಂತಾಗಿರುವ ಸಂದರ್ಭದಲ್ಲಿ ಸಾಲ ನೀಡಿದವರ ಕಾಟ ಈ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ವಿಷ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳಿತೆಂದು ಪ್ರತಿದಿನ ಕಣ್ಣೀರಿಡುತ್ತಿದ್ದಾರೆ ಎನ್ನಲಾಗಿದೆ.

ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳೂ ಕೂಡಲೇ ಈ ಬಡ ಕುಟುಂಬದ ನೆರವಿಗೆ ಮುಂದಾಗಬೇಕು ಎಂಬುದು ಸ್ಥಳೀಯ ನಾಗರಿಕರ ಆಗ್ರಹವಾಗಿದೆ.

ನಮಗೆ ಬೇರೆ ಏನು ಬೇಡ, ನಾವು ಕಷ್ಟ ಪಟ್ಟು ಕಟ್ಟಿಕೊಂಡ ಮನೆಯನ್ನು ಸರಿಪಡಿಸಿಕೊಡಿ. ಇಲ್ಲವಾದಲ್ಲಿ ಬೇರೆ ನಿವೇಶನ ಕೊಟ್ಟು ಅಲ್ಲಿ ಮನೆ ನಿರ್ಮಿಸಿಕೊಡಿ. ಬೇವರು ಹರಿಸಿ ಕಟ್ಟಿಕೊಂಡು ಮನೆಯು ಕಣ್ಣೆದುರೆ ಧರೆಗುರುಳಿರುವುದನ್ನು ಕಂಡು ವಿಷ ಸೇವಿಸುವಷ್ಟು ನೋವಾಗಿದೆ. ನಮ್ಮ ಸಮಸ್ಯೆಗೆ ಗ್ರಾಪಂ, ಕಂದಾಯ ಅಧಿಕಾರಿಗಳು ಸ್ಪಂದಿಸಿಲ್ಲ. ಪರಿಹಾರಕ್ಕೆ ಅರ್ಜಿ ನೀಡಿದರೂ ಒಂದು ರುಪಾಯಿಯೂ ಸಿಕ್ಕಿಲ್ಲ. ಬಾಡಿಗೆ ಮನೆಯಲ್ಲಿರಲೂ ಸಾಧ್ಯವಾಗುತ್ತಿಲ್ಲ. ಹಾನಿಯಾದ ಮನೆ ಮತ್ತೆ ನಿರ್ಮಿಸಲೂ ಹಣವಿಲ್ಲ. ನಿರ್ಮಿಸಿದರೂ ಮತ್ತೆ ಭೂ ಕುಸಿಯುವ ಆತಂಕವೂ ಇದೆ. ಸರಕಾರ, ರಾಜಕಾರಣಿಗಳು ಧಯಮಾಡಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು.
- ರಾಜು, ನೆರೆ ಸಂತ್ರಸ್ತ, ನೆಲ್ಲಿಕೆರೆ ಗ್ರಾಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News