ಸರಕಾರಿ ಯೋಜನೆಗಳು ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬ ಸಲ್ಲದು: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2019-10-10 16:50 GMT

ಚಿಕ್ಕಮಗಳೂರು, ಅ.10: ಸರಕಾರದ ಯೋಜನೆಗಳು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ವಿಳಂಬವಿಲ್ಲದೇ ಕಾನೂನಿನಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತ ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದ್ದು, ಇವುಗಳನ್ನು ಯಾವುದೇ ರೀತಿಯ ವಿಳಂಬವಿಲ್ಲದೇ ನಿಯಮಾನುಸಾರ ಶೇ.100ರಷ್ಟು ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಮೂಡಿಗೆರೆ ತಾಲೂಕಿನಲ್ಲಿ ದಲಿತರಿಗೆ ಜಮೀನಿನ ಹಕ್ಕು ಪತ್ರಗಳನ್ನು ನೀಡಿದ್ದರೂ ಅವರ ಹೆಸರುಗಳು ಪಹಣಿಯಲ್ಲಿ ದಾಖಲಾಗಿರುವುದಿಲ್ಲ. ಅಲ್ಲದೇ ಹದ್ದು ಬಸ್ತುಗಳು ಆಗಿರುವುದಿಲ್ಲ ಎಂದು ಹೆಚ್ಚು ದೂರುಗಳು ಕೇಳಿ ಬರುತ್ತಿದ್ದು, ಅವುಗಳನ್ನು ನಿಯಮಾನುಸಾರವಾಗಿ ಮಾಡಿಕೊಡಬೇಕು. ಈ ಬಗ್ಗೆ ಸಮಾಜ ಕಲ್ಯಾಣ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿ ಯಾವ ಕಾರಣಕ್ಕಾಗಿ ಕೊಟ್ಟಿಲ್ಲ ಎಂಬುದನ್ನು ತಹಶೀಲ್ದಾರ್ ಸಹಯೋಗದೊಂದಿಗೆ ಪರಿಶೀಲನೆ ಮಾಡಿ ಸರಿಪಡಿಸಬೇಕೆಂದು  ಸೂಚಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪುಸಿಕೊಡಲು ಮೆಸ್ಕಾಂ ಗುತ್ತಿಗೆದಾರರು ಹಣ ಕೇಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸಿದ್ದಲ್ಲಿ ಅಂತಹವರ ಮೇಲೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚಿಸಿದರು.

ನಗರದ ಅಂಬೇಡ್ಕರ್ ಭವನ ಶಿಥಿಲಾವಸ್ಥೆಯಲ್ಲಿದ್ದು, ಇದರ ದುರಸ್ಥಿ ಕಾರ್ಯವನ್ನು ಶೀಘ್ರದಲ್ಲಿ ಕೈಗೊಳ್ಳುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಯಾವುದೇ ಅಕ್ರಮ ಚಟಿವಟಿಕೆಗಳು  ನಡೆಯದಂತೆ ಎಚ್ಚರ ವಹಿಸಬೇಕು ಎಂದ ಅವರು ಇಲ್ಲಿನ ಖಾಸಗಿ ನಿವೇಶನದ ಮಾಲೀಕರಿಗೆ ಪರಿಹಾರದ ಹಣವನ್ನು ನೀಡಲು ಕ್ರಮ ವಹಿಸಬೇಕು ಎಂದರು.

ಅರಣ್ಯ ಹಕ್ಕು ಕಾಯಿದೆಯಡಿ ಹಕ್ಕು ಪತ್ರಗಳನ್ನು ನೀಡಿದ್ದರೂ ಅವರಿಗೆ ಸೂಕ್ತ ಕಂದಾಯ ದಾಖಲಾತಿಯಾಗಿರುವುದಿಲ್ಲ. ಈ ಬಗ್ಗೆ ತಹಸೀಲ್ದಾರ್ ಹಾಗೂ ಸಮಗ್ರ ಗಿರಿಜನ ಯೋಜನಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿ ಫಲಾನುಭವಿಗಳಿಗೆ ಸೂಕ್ತ ದಾಖಲೆಗಳನ್ನು ಒಂದು ತಿಂಗಳೊಳಗಾಗಿ ನೀಡಬೇಕೆಂದು ಹೇಳಿದರು.

ಜನವರಿಯಿಂದ ಈವರಗೆ 108 ದೌರ್ಜನ್ಯ  ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 101 ಪ್ರಕರಣಗಳಲ್ಲಿ 134.45 ಲಕ್ಷ ರೂಗಳ ಪರಿಹಾರ ಧನವನ್ನು 180 ಸಂತ್ರಸ್ತರಿಗೆ ನೀಡಲಾಗಿದೆ ಎಂದ ಅವರು ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಶೀಘ್ರವಾಗಿ ಪರಿಹಾರದ ಹಣವನ್ನು ಮಂಜೂರು ಮಾಡಬೇಕು. ಪ್ರಕರಣಗಳು ನ್ಯಾಯಾಲಯದಲ್ಲಿ ಶೀಘ್ರ ವಿಲೇವಾರಿಗೆ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಕಾನೂನು ಇಲಾಖೆಗೆ ಪತ್ರ ಬರೆಯಬೇಕು ಎಂದು ಸೂಚನೆ ನೀಡಿದರು.

ಕಡೂರು ತಾಲೂಕಿನ ಅರಳಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರದ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ಶೃತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯರಾದ ಶೂದ್ರ ಶ್ರೀನಿವಾಸ್, ರೇಣುಕಾರಾಧ್ಯ, ರಾಮಪ್ಪ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News