ಆನವಟ್ಟಿ ತಾಲೂಕು ರಚನೆ ಹೋರಾಟ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಕಾರ್ತಿಕ್ ಸಾಹುಕಾರ್ ಆಯ್ಕೆ

Update: 2019-10-10 17:12 GMT

ಶಿವಮೊಗ್ಗ, ಅ. 10: ಜಿಲ್ಲೆಯ ಸೊರಬ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಆನವಟ್ಟಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕೆಂಬ ಕೂಗು ಮತ್ತಷ್ಟು ಜೋರಾಗಲಾರಂಭಿಸಿದೆ. ಈ ಸಂಬಂಧ ಪ್ರತ್ಯೇಕ ತಾಲೂಕು ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ಸ್ಥಳೀಯ ಯುವ ಮುಖಂಡ ಕಾರ್ತಿಕ್ ಸಾಹುಕಾರ್ ವರನ್ನು ನೇಮಿಸಲಾಗಿದೆ. 

ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸುವುದು, ಮುಖ್ಯಮಂತ್ರಿ ಹಾಗೂ ಸಂಬಂಧಿತ ಸಚಿವರನ್ನು ಭೇಟಿಯಾಗಿ ಮನವಿ ಅರ್ಪಿಸುವ ಮೂಲಕ ನಿರಂತರವಾಗಿ ಸರ್ಕಾರದ ಗಮನ ಸೆಳೆಯಲು ಪ್ರಮುಖರು ನಿರ್ಧರಿಸಿದ್ದಾರೆ. 

ಸಹಕಾರ ಅಗತ್ಯ: ತಾಲೂಕು ಪಂಚಾಯತ್ ಉಪಾಧ್ಯಕ್ಷ ಸುರೇಶ್ ಹಾವಣ್ಣರವರು ಮಾತನಾಡಿ, 'ಆನವಟ್ಟಿ ತಾಲೂಕು ಕೇಂದ್ರವಾಗಬೇಕು ಎಂಬುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ಬೆಂಬಲವಿದೆ. ತಾಲೂಕು ಹೋರಾಟಕ್ಕೆ ಪ್ರತಿಯೋರ್ವರ ಬೆಂಬಲ ಅತ್ಯವಶ್ಯಕಾಗಿದೆ' ಎಂದು ತಿಳಿಸಿದರು. 

ತಾಲೂಕು ಕೇಂದ್ರವಾದ ಸೊರಬಕ್ಕೆ ಆನವಟ್ಟಿಯ ಬಾರಂಗಿ ಹಾಗೂ ತತ್ತೂರು ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 30 ಕಿ.ಮೀ. ದೂರವಾಗುತ್ತದೆ. ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕೆ 90 ರಿಂದ 100 ಕಿ.ಮೀ. ಆಗುತ್ತದೆ. ನಾಗರೀಕರ ಅನುಕೂಲಕ್ಕಾಗಿ ಆನವಟ್ಟಿ ತಾಲೂಕು ಕೇಂದ್ರವಾಗಿ ಮಾರ್ಪಡಿಸುವುದು ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ತಾಲೂಕು ಹೋರಾಟ ಸಮಿತಿಯ ನೂತನ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ರವರು ಮಾತನಾಡಿ, 'ಆನವಟ್ಟಿಯು ತಾಲೂಕು ಕೇಂದ್ರವಾಗಿ ಮೇಲ್ದರ್ಜೆಗೇರುವ ಎಲ್ಲ ಅರ್ಹತೆ ಹೊಂದಿದೆ. ತಾಲೂಕು ಕೇಂದ್ರಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಸುಮಾರು 260 ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಕಚೇರಿ-ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರಿ ಜಾಗದ ಲಭ್ಯತೆಯಿದೆ. ಆದರೆ ಇಷ್ಟೆಲ್ಲ ಅರ್ಹತೆ ಹೊಂದಿದ್ದರೂ ಇಲ್ಲಿಯವರೆಗೂ ಆನವಟ್ಟಿ ತಾಲೂಕು ಕೇಂದ್ರವಾಗಿ ರಚನೆಯಾಗದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ. ಹಾಗೆಯೇ ನಮ್ಮೆಲ್ಲರ ಇಚ್ಛಾಶಕ್ತಿಯ ಕೊರತೆಯು ಕಾರಣವಾಗಿದೆ. ಇನ್ನು ಮುಂದೆ ಹೋರಾಟ ತೀವ್ರಗೊಳಿಸೊಣ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದು ಬೇಡ ಎಂದು ತಿಳಿಸಿದ್ದಾರೆ. 

ಸಭೆಯಲ್ಲಿ ಪ್ರಾಸ್ತಾವಿಕವಾಗಿ ವಕೀಲ ಶಿವಪ್ಪರವರು ಮಾತನಾಡಿದರು. ಸೊರಬ ತಾಲೂಕು ಯುವಜನ ಸಂಘದ ಅಧ್ಯಕ್ಷರಾದ ಸಂಪತ್‍ಕುಮಾರ್, ಗ್ರಾಮ ಪಂಚಾಯ್ತಿ ಸದಸ್ಯ ಉಮೇಶ್ ಉಡುಗಣಿ, ದೇವರಾಜ್ ಬೆಲವಂತನಕೊಪ್ಪ, ಸತೀಶ್ ಹೊಸಳ್ಳಿ, ಮಹಾಂತೇಶ್ ಕಳ್ಳಿಕೊನೆ ತತ್ತೂರ್, ನಾಗರಾಜ್ ಹುರುಳಿಕೊಪ್ಪ, ನಾಗರಾಜ್ ಚಿಕ್ಕಚೌಟಿ, ನೋಟರಿ ಶಿವಪ್ಪ ಮಲ್ಲಾಪುರ, ದೇವರಾಜ್ ಹುರುಳಿ, ರಾಜು ಎಸ್. ಶರಿಗೋಡು ಮೊದಲಾದವರಿದ್ದರು. 

'ಮುಖ್ಯಮಂತ್ರಿ ಭೇಟಿಯಾಗಿ ಮನವಿ ಅರ್ಪಣೆ'
'ಜಿಲ್ಲೆಯವರೇ ಆದ ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನು ನಿಯೋಗ ಭೇಟಿಯಾಗಿ ಚರ್ಚಿಸಲಿದೆ. ಆನವಟ್ಟಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸುವಂತೆ ಮನವಿ ಮಾಡಲಿದೆ. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆ ಸಚಿವರು, ಸೊರಬ ಕ್ಷೇತ್ರದ ಶಾಸಕರಿಗೂ ಮನವಿ ಅರ್ಪಿಸಲಾಗುವುದು. ತಾಲೂಕು ಕೇಂದ್ರ ಘೋಷಣೆಯಾಗುವವರೆಗೂ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಆನವಟ್ಟಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ರವರು ಸ್ಪಷ್ಟಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News