ಬೆಳೆಹಾನಿ ಪರಿಹಾರ ಶೀಘ್ರ ವಿತರಿಸಿ: ಕಂದಾಯಾಧಿಕಾರಿಗಳಿಗೆ ಕೊಡಗು ಜಿಲ್ಲಾಧಿಕಾರಿ ಸೂಚನೆ

Update: 2019-10-10 17:18 GMT

ಮಡಿಕೇರಿ, ಅ.10 : ಜಿಲ್ಲೆಯಲ್ಲಿ ತೀವ್ರ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ವಿತರಿಸಲು ಬೆಳೆಹಾನಿ ಸಮೀಕ್ಷೆಯನ್ನು ಎರಡು ದಿನದೊಳಗಾಗಿ ದಾಖಲೆ ಸಹಿತ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ ಕಂದಾಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಂದ ಬೆಳೆಹಾನಿ ಪರಿಹಾರ ಸಮೀಕ್ಷೆ ಕುರಿತು ಮಾಹಿತಿ ಪಡೆದು, ಕಳೆದ ವರ್ಷದಂತೆ ಈ ವರ್ಷವೂ ಅತಿವೃಷ್ಟಿಯಿಂದಾಗಿ ಹೆಚ್ಚು ಪ್ರಮಾಣದಲ್ಲಿ ಭತ್ತ, ಕಾಫಿ, ಕರಿಮೆಣಸು, ತೋಟಗಾರಿಕೆ ಬೆಳೆ ಹಾಗೂ ಇತರೆ ಬೆಳೆಹಾನಿ ಸಂಭವಿಸಿದ್ದು, ಅರ್ಹ ರೈತರಿಗೆ ಸಕಾಲದಲ್ಲಿ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಬೆಳೆಹಾನಿ ಪರಿಹಾರಕ್ಕೆ ಅರ್ಹರಾದ ರೈತರ ಹೆಸರು ಬಿಟ್ಟು ಹೋಗಿದ್ದಲ್ಲಿ, ಅಂತವರ ಹೆಸರನ್ನು ಪುನಃ ಸೇರಿಸಬೇಕು. ಇದರೊಂದಿಗೆ ಸಮರ್ಪಕ ದಾಖಲೆ ನೀಡದವರಿಗೆ ಅಗತ್ಯ ಹಿಂಬರಹ ನೀಡಿ ಅರ್ಹರಿಗೆ ಪರಿಹಾರ ಹಣವು ಶೀಘ್ರದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುವಂತೆ ಕ್ರಮಕೈಗೊಳ್ಳಲು ಕಂದಾಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.  

ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ವಿವಿಧ ಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಜಾಗದ ಆರ್‍ಟಿಸಿ ಇದುವರೆಗೂ ಇಲಾಖೆಯ ಹೆಸರಿಗೆ ಬಂದಿರುವುದಿಲ್ಲ. ಇದರ ಬಗ್ಗೆ ಸೂಕ್ತ ಕ್ರಮವಹಿಸಲು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ತೋಟಗಾರಿಕಾ ಇಲಾಖೆಗೆ ಸೇರಿದ ಜಾಗ ಸರ್ವೇ ನಡೆಸಿ ಇಲಾಖೆಯ ಹೆಸರಿಗೆ ಆರ್‍ಟಿಸಿ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅರುಂಧತಿ ಅವರು ಜಿಲ್ಲೆಯಲ್ಲಿ 83 ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಈಗಾಗಲೇ ಒದಗಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅವರು ಕಂದಾಯ ನಿರೀಕ್ಷಕರಿಂದ ಅಂಗನವಾಡಿಗೆ ಜಾಗ ಗುರುತಿಸಿ ಕೊಡುವುದರ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ಪಡೆದು ತುರ್ತಾಗಿ ಜಾಗವನ್ನು ಮಂಜೂರು ಮಾಡಿ ಅಂಗನವಾಡಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಸಿಎ ನಿವೇಶನ ನೀಡಿ ಕ್ರಮವಹಿಸುವಂತೆ ಕಂದಾಯಾಧಿಕಾರಿಗಳಿಗೆ ಸೂಚಿಸಿದರು. 

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ಜಿಲ್ಲೆಯ ವಿವಿಧೆಡೆ ಮಂಜೂರಾಗಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಾಗೂ ಜಿಲ್ಲೆಗೆ ಮಂಜೂರಾಗಿರುವ ವೃತ್ತಿಪರ ಮಹಿಳಾ ಕಾಲೇಜಿಗೆ ಜಾಗ ಬೇಕಿದೆ ಎಂದು ಅವರು ಮನವಿ ಮಾಡಿದರು.   

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಅಂಬೇಡ್ಕರ್ ಭವನಕ್ಕೆ ಹಾಗೂ ವೃತ್ತಿಪರ ಮಹಿಳಾ ಕಾಲೇಜಿಗೆ ಅಗತ್ಯವಿರುವ ನಿವೇಶನವನ್ನು ಗುರುತಿಸಿ ಇಲಾಖೆಯ ಸುಪರ್ದಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ತಹಶೀಲ್ದಾರರಿಗೆ ಸೂಚಿಸಿದರು.  ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಅವಶ್ಯವಿರುವ ಜಾಗವನ್ನು ಗುರುತಿಸಿ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. 

ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ ಅವರು ಅತಿವೃಷ್ಟಿಯಿಂದ ಮಡಿಕೇರಿ ತಾಲೂಕಿನಲ್ಲಿ 35, ವಿರಾಜಪೇಟೆ ತಾಲೂಕಿನಲ್ಲಿ 65 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 17 ದನದ ದೊಡ್ಡಿಗಳು ಹಾನಿಗೊಳಗಾಗಿದ್ದು, ಈ ಸಂಬಂಧ ಪರಿಹಾರ ವಿತರಣೆಗೆ ದಾಖಲೆ ಪಡೆದುಕೊಂಡಿರುವುದಾಗಿ ಸಭೆಯ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಮಾತನಾಡಿ, ಹಾನಿಗೊಳಗಾದ ದೊಡ್ಡಿಗಳಿಗೆ ಅಗತ್ಯ ಪರಿಹಾರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಆಶ್ರಯ ವಸತಿ ಯೋಜನೆ, ಅಂಗನವಾಡಿ, ಸ್ಮಶಾನ, ಕಸ ವಿಲೇವಾರಿಗೆ ಜಾಗದ ಮಂಜೂರಾತಿ ಸಂಬಂಧಿಸಿದ ಪ್ರಗತಿ ಮಾಹಿತಿ ಪಡೆದು ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯಾಧಿಕಾರಿಗಳಿಗೆ ನಿರ್ದೇಶನ ನಿಡಿದರು. 

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ತಹಶೀಲ್ದಾರ್ ಮಹೇಶ್, ಗೋವಿಂದರಾಜು, ಪೊನ್ನು, ಕಂದಾಯ ನಿರೀಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News