ರಾಜ್ಯ ಸರ್ಕಾರ ಹೇಳಿದಂತೆ ಸಂತ್ರಸ್ತರಿಗೆ ನೆರೆ ಪರಿಹಾರ ತಲುಪಿಲ್ಲ: ಬಡಗಲಪುರ ನಾಗೇಂದ್ರ ಆರೋಪ

Update: 2019-10-10 17:26 GMT

ಮೈಸೂರು,ಅ.10: ರಾಜ್ಯ ಸರ್ಕಾರ ನೆರೆ ಪೀಡಿತರಿಗೆ ಪರಿಹಾರ ಕೈಗೊಂಡಿದೆ ಎಂದು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಹೀರಾತುಗಳ ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ. ಅವುಗಳಲ್ಲಿ ತಿಳಿಸಿರುವ ಪರಿಹಾರ ಶೇ.10 ಜನರನ್ನು ತಲುಪಿಲ್ಲ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೆರೆ ಸಂತ್ರಸ್ತರಿಗೆ ಹತ್ತು ಸಾವಿರ ರೂ. ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಅದು ಎಷ್ಟು ಜನಕ್ಕೆ ತಲುಪಿದೆ ಎಂಬುದು ಪ್ರಶ್ನಾರ್ಹವಾಗಿದೆ. ಇದೇ ವೇಳೆ ಉತ್ತರ ಕರ್ನಾಟಕದಲ್ಲಿ ಎಮ್ಮೆ, ಕುರಿ ಕಳೆದುಕೊಂಡವರಿಗೂ ಪರಿಹಾರ ದೊರಕಿಲ್ಲ. ಹೀಗಾಗಿ ಸರ್ಕಾರದ ಜಾಹೀರಾತುಗಳು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿವೆ ಎಂದು ದೂರಿದರು.

ಇನ್ನು, ಸರ್ಕಾರದ ಅಂದಾಜಿನಂತೆ ಏಳು ಲಕ್ಷ ಮಂದಿ ಸಂತ್ರಸ್ತರಾಗಿದ್ದರೆಂದು ಹೇಳಲಾಗುತ್ತಿದೆ. ಆದರೆ ತಮ್ಮ ರೈತ ಸಂಘದ ತಂಡಗಳು ಸುತ್ತಾಡಿ ಗಮನಿಸಿದಾಗ ಸುಮಾರು ಹತ್ತೂವರೆ ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಮೇಲೆ ಜಲಾಶಯಗಳು ಭರ್ತಿಯಾಯಿತೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಇವುಗಳಿಂದ ರೈತರಿಗೆ ಏನೂ ಅನುಕೂಲವಾಗಲಿಲ್ಲ. ಬದಲಾಗಿ ನೆರೆ ಬಂದಿರುವುದರ ಜೊತೆಗೆ ಬರ ಪರಸ್ಥಿತಿಯೂ ಮುಂದುವರಿದಿದೆ ಎಂದು ಹೇಳಿದರು.

ಇದೇ ಅ.14 ರಂದು ಬೆಂಗಳೂರಿನಲ್ಲಿ ರೈತ ಸಂಘದಿಂದ ಬೃಹತ್ ಸಮಾವೇಶ ಆಯೋಜಿಸಿ, ರಾಜ್ಯದ ಬರ, ನೆರೆ ಪರಿಸ್ಥಿತಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಲಾಗುವುದು. ಅದರಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬರುವ ಸುಮಾರು 10 ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆಂದರು.

ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಉದ್ಭವ ಶಿಶುಗಳಂತಿರುವ ರಾಜ್ಯದಲ್ಲಿನ ಕೇಂದ್ರ ಸಚಿವರು ಹಾಗೂ ಸಂಸದರು ಪ್ರವಾಸ ಸಂತ್ರಸ್ತರ ಪರಿಸ್ಥಿತಿ ಬಗ್ಗೆ ಪ್ರಧಾನಿಯೆದುರು ದನಿಯೆತ್ತಲು ಹೆದರುತ್ತಿದ್ದಾರೆ. ಹೀಗಾಗಿ ಈ ಎಲ್ಲರ ಮನೆ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಅ.14ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಮಾವೇಶ ನಡೆಯಲಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಉದ್ಘಾಟಿಸುವರು. ರೈತರ ಸಂಘದ ಇಲ್ಲಿನ ಮುಖಂಡರು ಮಾತ್ರವಲ್ಲದೆ, ತಮಿಳುನಾಡು, ಕೇರಳ, ಆಂದ್ರಗಳಿಂದಲೂ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಇದರ ಪ್ರಯುಕ್ತ 12 ರಂದು ಬೆಳಗ್ಗೆ ತಲಕಾವೇರಿಯಿಂದ ವಾಹನ ಜಾಥಾ ಹೊರಡಲಿದೆ. 13 ರಂದು ಅದು ಮೈಸೂರು ತಲುಪಿ ವಾಸ್ತವ್ಯ ಹೂಡಿ, ಬಳಿಕ ಬೆಂಗಳೂರಿಗೆ ಪ್ರಯಾಣಿಸಲಿದೆ ಎಂದು ಮಾಹಿತಿ ನೀಡಿದರು.

ಎಂ.ಎಸ್. ಲೋಕೇಶ್‍ರಾಜೇ ಅರಸ್, ಎಚ್.ಸಿ. ಲೋಕೇಶ್‍ರಾಜೇ ಅರಸ್, ಹೊಸಕೋಟೆ ಬಸವರಾಜು, ಪಿ. ಮರಂಕಯ್ಯ, ಇನ್ನಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News