ಮಕ್ಕಳ ಅಪಹರಣಕಾರರೆಂಬ ಶಂಕೆಯಲ್ಲಿ ಕಂಬಕ್ಕೆ ಕಟ್ಟಿ ಹಾಕಿ ಇಬ್ಬರಿಗೆ ಥಳಿತ

Update: 2019-10-10 17:29 GMT

ಬಿಲ್ವಾರ, ಅ. 10: ಮಕ್ಕಳ ಅಪಹರಣಕಾರರೆಂದು ಶಂಕಿಸಿ ಇಬ್ಬರು ವ್ಯಕ್ತಿಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ರಾಜಸ್ಥಾನದ ಧೋಲಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 8ರಂದು ಈ ಘಟನೆ ನಡೆದಿದೆ. ಮಕ್ಕಳನ್ನು ಅಪಹರಣಗೈಯುತ್ತಿದ್ದಾರೆ ಎಂಬ ಶಂಕೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದರು. ಇಬ್ಬರಿಗೂ ಗುಂಪು ಥಳಿಸಿತು. ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ರಕ್ಷಿಸಿದರು.

 ನಾವು ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಐವರನ್ನು ಬಂಧಿಸಿದ್ದೇವೆ. ಗುಂಪಿನಿಂದ ಹಲ್ಲೆಗೊಳಗಾದ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದು ಅಸಿಂದ್‌ನ ಪೊಲೀಸ್ ಉಪ ಅಧೀಕ್ಷಕ ರೋಹಿತ್ ಮೀನಾ ಹೇಳಿದ್ದಾರೆ.

ಗುಂಪು ನಮ್ಮನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿತು. ಅಲ್ಲದೆ ಪೊಲೀಸರು ಆಗಮಿಸಿ ಮಧ್ಯಪ್ರವೇಶಿಸುವ ವರೆಗೆ ಒಂದು ಗಂಟೆಗಳ ಕಾಲ ಥಳಿಸಿತು ಎಂದು ಸಂತ್ರಸ್ತರು ಹೇಳಿದ್ದಾರೆ.

 ‘‘ನಾನು ಮತ್ತು ನನ್ನ ಗೆಳೆಯ ಕೆಲವು ಕಾರ್ಯದ ನಿಮಿತ್ತ ಕಲಿಯಾಸ್ ಗ್ರಾಮಕ್ಕೆ ತೆರಳಿದ್ದೆವು. ನಾವು ಬೈಕ್‌ನಲ್ಲಿ ಹಿಂದಿರುಗುತ್ತಿದ್ದೆವು. ಟೋಲಿ ಖೇಡಾ ಗ್ರಾಮದಲ್ಲಿ ಕೆಲವರು ಇದ್ದಕ್ಕಿದ್ದಂತೆ ನಮ್ಮನ್ನು ತಡೆದರು. ನಾವು ಮಕ್ಕಳ ಅಪಹರಣಕಾರರು ಎಂದು ಆರೋಪಿಸಿದರು. ಅನಂತರ ಅವರು ನಮ್ಮನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದರು. ನಾವು ಅಮಾಯಕರು ಎಂದು ಮನವಿ ಮಾಡಿದೆವು. ಆದರೆ, ಯಾರೊಬ್ಬರೂ ಕೇಳಲಿಲ್ಲ. ಅನಂತರ ಗುಂಪು ಪೊಲೀಸರಿಗೆ ಮಾಹಿತಿ ನೀಡಿತು ಹಾಗೂ ನಾವು ಮಕ್ಕಳ ಅಪಹರಣಕಾರರು ಎಂದು ಆರೋಪಿಸಿತು’’ ಎಂದು ಸಂತ್ರಸ್ತರಲ್ಲಿ ಓರ್ವನಾದ ಉದಯ್‌ರಾಮ್ ಭಿಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News