ಮನುಸ್ಮತಿ: ಅಪರಾಧ ಮತ್ತು ಶಿಕ್ಷೆ

Update: 2019-10-10 18:30 GMT

 ಪ್ರಾಚೀನ ಭಾರತದ ಶೇ. 70ರಷ್ಟು ಜನರನ್ನು ಗುಲಾಮರನ್ನಾಗಿ ಆಳಲು ಕಾರಣವಾದ ‘ಮನುಸ್ಮತಿ’ ಮತ್ತೆ ಚರ್ಚೆಗೆ ಬಂದಿದೆ. ಮನುವಾದಿ ಚಿಂತನೆಗಳು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಮನುಸ್ಮತಿಯನ್ನು ಬೇರೆ ಬೇರೆ ರೂಪಗಳಲ್ಲಿ ಜನರ ನಡುವೆ ತರುವ ಪ್ರಯತ್ನ ನಡೆಯುತ್ತಿದೆ. ಆದುದರಿಂದ ಮನುಸ್ಮತಿ ಎಂದರೇನು, ಅದರ ನಿಜವಾದ ಉದ್ದೇಶವೇನು ಇತ್ಯಾದಿಗಳು ಜನರನ್ನುಅದರಲ್ಲೂ ಮುಖ್ಯವಾಗಿ ಹಿಂದುಳಿದವರ್ಗ, ದಲಿತರನ್ನು ತಲುಪುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ನಿಟ್ಟಿನಲ್ಲಿ ತೆಲುಗಿನಲ್ಲಿ ಕೆ. ಬಾಲಗೋಪಾಲ್ ಬರೆದ ‘ಮನು ಸ್ಮತಿ-ಅಪರಾಧ ಮತ್ತು ಶಿಕ್ಷೆ’ ಮುಖ್ಯವಾದುದು. ಬಿ. ಸುಜ್ಞಾನ ಮೂರ್ತಿ ಕೃತಿಯನ್ನು ಅನುವಾದಿಸಿದ್ದಾರೆ.

ಮನುಸ್ಮತಿ ಪ್ರಾಚೀನ ಭಾರತೀಯ ಸಮಾಜದ ಸಾಮಾಜಿಕ ವಿಧಿ-ನಿಷೇಧಗಳನ್ನು, ನೀತಿ-ನಡವಳಿಯ ಕಟ್ಟುಪಾಡುಗಳನ್ನು ಹೇಳುವ ಕುತೂಹಲಕಾರಿ ಕೃತಿ. ಈ ಕೃತಿ ವರ್ಣಾಶ್ರಮ ಧರ್ಮವನ್ನು ಸಮಾಜದ ಎಲ್ಲ ವಲಯಗಳಲ್ಲಿ ಆಚರಿಸುವುದಕ್ಕೆ ಬಲವಂತಪಡಿಸುತ್ತದೆ. ಜಾತಿ ಮತ್ತು ಲಿಂಗಭೇದದ ತಾರತಮ್ಯದ ನೆಲೆಗಟ್ಟಿನಲ್ಲಿ ಭಾರತೀಯ ಸಂಸ್ಕೃತಿಯನ್ನು, ಸಮಾಜವನ್ನು ಕೆಟ್ಟದಾಗಿ, ಕೀಳಾಗಿ, ಅಸಹ್ಯವಾಗಿ ಚಿತ್ರಿಸಿದ ಜೀವ ವಿರೋಧಿ ಕೃತಿಯಾಗಿದೆ. ಪ್ರಾಚೀನ ಭಾರತದಲ್ಲಿ ವರ್ಣವ್ಯವಸ್ಥೆಯನ್ನು ಸ್ಥಾಪಿಸಿದ, ಶಾಶ್ವತಗೊಳಿಸಿದ, ಆ ಮೂಲಕ ವೈದಿಕ ಶಾಹಿಯ ಮೇಲ್ಮೆಯನ್ನು ವೆುರೆಸುವ ಮಾನವ ವಿರೋಧಿ ಕೃತಿಯೂ ಹೌದು ಎಂದು ಈ ಪುಸ್ತಕ ಅಭಿಪ್ರಾಯಪಡುತ್ತದೆ. ಸಾಮಾಜಿಕ ತರತಮವನ್ನು, ಸಂಘರ್ಷವನ್ನು ಸಮಾಜದ ಮನೋಭಿತ್ತಿಯಲ್ಲಿ ಮಾನಸಿಕ ಹಿಂಸೆಯ ಮೂಲಕ, ಭೌತಿಕ ಹಿಂಸೆಯ ಮೂಲಕ ಬಿಂಬಿಸುವ ಮನುಪ್ರಣೀತ ಮನಸ್ಸುಗಳು ಸಾವಿರಾರು ವರ್ಷಗಳಿಂದ ಅವಿರತ ಪ್ರಯತ್ನ ಮಾಡುತ್ತಲೇ ಇದೆ. ಆ ಪ್ರಯತ್ನಕೆ ಈ ಕೃತಿ ಸಣ್ಣದೊಂದು ಪ್ರತಿರೋಧವನ್ನು ವ್ಯಕ್ತಪಡಿಸಿದೆ.

ಕೃತಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಮನು ಅಪರಾಧ ಸಂಹಿತೆ-ನಾಗರಿಕರ ಹಕ್ಕುಗಳು, ಭೌತಿಕ ಹಿಂಸೆ-ದೂಷಣೆ, ಲೈಂಗಿಕ ಅಪರಾಧಗಳ ಕುರಿತಂತೆ ಮನುಸ್ಮತಿ ಏನು ಹೇಳುತ್ತದೆ ಎನ್ನುವುದನ್ನು ವಿವರಿಸಲಾಗಿದೆ. ಎರಡನೆಯ ಭಾಗದಲ್ಲಿ , ಬ್ರಾಹ್ಮಣ ಧರ್ಮಶಾಸ್ತ್ರಗಳಲ್ಲಿ ರಾಜ್ಯಾಂಗ ನಿಯಂತ್ರಣ, ರಾಜ್ಯ-ರಾಜ-ರಾಜತ್ವ, ಅಧಿಕಾರ ಯಂತ್ರಾಂಗ ಮತ್ತು ನ್ಯಾಯ ವ್ಯವಸ್ಥೆ, ಉತ್ಪಾದನಾ ವ್ಯವಸ್ಥೆ-ಆರ್ಥಿಕ ಜೀವನ, ಮಹಿಳೆಯರ ಸ್ಥಿತಿಗತಿಗಳ ವಿವರಗಳಿವೆ.

ಲಡಾಯಿ ಪ್ರಕಾಶನ ಗದಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 124. ಮುಖಬೆಲೆ 80 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News