ಕಲ್ಲನ್ನೂ ಹೂವಾಗಿಸಿದವರು ಜೆ.ಪಿ.

Update: 2019-10-10 18:34 GMT

ಒಬ್ಬ ಸ್ವಾತಂತ್ರ ಹೋರಾಟಗಾರ, ಅಪ್ರತಿಮ ರಾಷ್ಟ್ರಪ್ರೇಮಿ, ಕ್ವಿಟ್ ಇಂಡಿಯಾ ಚಳವಳಿಯ ನೇತಾರ, ಚಂಬಲ್ ಕಣಿವೆಯ ಡಕಾಯಿತರ ಬದುಕನ್ನು ಬದಲಾಯಿಸಿದ ಮಾನವತಾವಾದಿ, ಭೂದಾನ ಚಳವಳಿಯ ಕಾರ್ಯಕರ್ತ, ಕೇಂದ್ರದ ಕಾಂಗ್ರೆಸೇತರ ಸರಕಾರದ ಸ್ಥಾಪನೆಯ ಹಿಂದಿನ ಪ್ರೇರಕ ಶಕ್ತಿ, ವಿದ್ಯಾರ್ಥಿ ಯುವ ಜನರ ಹೋರಾಟದ ಸ್ಫೂರ್ತಿಯ ಸಂಕೇತ ಹೀಗೆ ಜಯಪ್ರಕಾಶ್ ನಾರಾಯಣ್‌ರವರ ಬದುಕಿನ ವ್ಯಕ್ತಿತ್ವ ಬಹಳ ಹಿರಿದು. ಆದರೆ ಜೆ.ಪಿ.ಯವರ ಭ್ರಷ್ಟಾಚಾರದ ವಿರುದ್ಧ ಹೋರಾಟದಿಂದ ಸ್ಫೂರ್ತಿ ಪಡೆದವರು ಇಂದು ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ವಂಶಪಾರಂಪರ್ಯದ ಆಡಳಿತ ವಿರುದ್ಧ ಧ್ವನಿ ತೆಗೆದವರು ಇಂದು ಅದನ್ನು ಮರೆತೇ ಬಿಟ್ಟಿದ್ದಾರೆ. ‘‘ಸರಕಾರಗಳು ಬದಲಾದರೆ ಸಾಲದು, ಆಳುವ ಜನರ ಮನಸ್ಸು ಬದಲಾಗಬೇಕು, ವ್ಯವಸ್ಥೆ ಬದಲಾಗಬೇಕು’’ ಎಂಬ ಜೆ.ಪಿ.ಯವರ ಕನಸಿನ ಹಿಂದೆ ಹೊರಟವರು ಇಂದು ಈ ಮಾತುಗಳನ್ನು ಮರೆತೇಬಿಟ್ಟಿದ್ದಾರೆ.

ಅವರೆಲ್ಲ ಜೆ.ಪಿ.ಯವರನ್ನು ಮರೆತರು. ಅವರ ಹೋರಾಟದ ಉದ್ದೇಶಗಳನ್ನು ಮೊದಲೇ ಮರೆತರು. ಹಾಗಾಗಿ ಅವುಗಳೆಲ್ಲದರ ಬಗ್ಗೆ ಬರೆದು ನೋವುಣ್ಣುವುದಕ್ಕಿಂತ ಜೆ.ಪಿ.ಯವರು ಚಂಬಲ್ ಕಣಿವೆಯಲ್ಲಿ ಡಕಾಯಿತರ ಮನಸ್ಸನ್ನು ಪರಿವರ್ತಿಸಿದ ಕಾರ್ಯವನ್ನು ಅವರ ಜನ್ಮ ದಿನದಂದು ನೆನೆಯುವುದೇ ಸೂಕ್ತ ಎಂದೆನಿಸುತ್ತದೆ.

ಬುದ್ಧ ಒಬ್ಬ ಅಂಗುಲಿಮಾಲನನ್ನು ಪರಿವರ್ತಿಸಿದ. ಜೆ.ಪಿ. ಅಂಗುಲಿ ಮಾಲನಂತಹ ನೂರಾರು ಜನರ ಬದುಕಿಗೆ ಪರಿವರ್ತನೆಯ ನಾಂದಿ ಹಾಡಿದರು.

ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಇವುಗಳನ್ನೊಳಗೊಂಡಂತೆ ಕಿರಿದಾದ ದಟ್ಟವಾದ ಬೆಟ್ಟ,ಗುಡ್ಡಗಳ ರಮಣೀಯವಾದ ಪ್ರದೇಶ ಚಂಬಲ್ ಕಣಿವೆ. ಪ್ರಕೃತಿದತ್ತವಾಗಿ ಇಷ್ಟೊಂದು ಸುಂದರವಾಗಿರುವ ಅದರ ಅಧಿಪತಿಗಳು ರಾಕ್ಷಸ ಮನಸ್ಸಿನ ಡಕಾಯಿತರು. ಚಂಬಲ್ ಕಣಿವೆ ಎಂದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬೆಚ್ಚಿ ಬೀಳುತ್ತಿದ್ದವು. ಇಲ್ಲಿನ ಡಕಾಯಿತರ ಅಟ್ಟಹಾಸ ತಡೆಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಇವರು ಕೂಡಾ ತಮ್ಮ ಮೇಲೆ ಶ್ರೀಮಂತ ಜಮೀನುದಾರರಿಂದ ನಡೆದ ಅನೇಕ ಅನ್ಯಾಯ, ದಬ್ಬಾಳಿಕೆಗೆ ಒಳಪಟ್ಟು, ತಾವಿದ್ದ ಹಳ್ಳಿಗಳಲ್ಲಿ ತಮ್ಮ ವಿರುದ್ಧ ದಬ್ಬಾಳಿಕೆ ಮಾಡಿದವರನ್ನು ಕೊಲೆಗೈದು, ಜೀವ ರಕ್ಷಣೆಗಾಗಿ ಚಂಬಲ್ ಕಣಿವೆಯಲ್ಲಿ ಆಶ್ರಯ ಪಡೆದವರಾಗಿದ್ದರು. ಈ ರೀತಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇಂತಹ ದಾರಿ ತುಳಿದಂತಹವರ ಸಂಖ್ಯೆ ಸಾವಿರಕ್ಕೂ ಮಿಗಿಲು. ಇವರನ್ನೆಲ್ಲ ಬಂದೂಕುಗಳಿಂದ ಬದಲಾಯಿಸಲು ಸಾಧ್ಯವಿರಲಿಲ್ಲ. ಇಂತಹವರನ್ನು ಹೊಸದಾರಿಗೆ ತರಬೇಕೆಂಬ ಬಯಕೆ ಆಚಾರ್ಯ ವಿನೋಭಾ ಭಾವೆಯವರದ್ದಾಗಿತ್ತು. ಡಕಾಯಿತರ ಗುಂಪಿನ ಕೆಲವರು 1960ರಲ್ಲಿ ವಿನೋಭಾ ಭಾವೆಯವರನ್ನು ಭೇಟಿ ಮಾಡಿ ತಮಗೆ ಜೀವ ರಕ್ಷಣೆ ನೀಡಿ ಹೊಸ ಬದುಕನ್ನು ನಡೆಸಲು ಅನುವು ಮಾಡಿಕೊಡುವುದಾದರೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗತಿಯಾಗುವುದಾಗಿ ಕೇಳಿಕೊಂಡ ಪರಿಣಾಮವಾಗಿ ವಿನೋಭಾ ಭಾವೆಯವರು 1960ರಲ್ಲಿ ಚಂಬಲ್ ಕಣಿವೆಯ ಸುಪ್ರಸಿದ್ಧ 40 ಜನ ಡಕಾಯಿತರನ್ನು ಶರಣಾಗತಿ ಮಾಡುವಲ್ಲಿ ಯಶಸ್ವಿಯಾದರು. ಆದರೆ ಆನಂತರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಿಯಾದ ರೀತಿಯಲ್ಲಿ ಸಹಕಾರ ನೀಡದೆ ಡಕಾಯಿತರ ಬದುಕಿನ ಬಗ್ಗೆ ಅಸಡ್ಡೆ ತೋರಿದಕಾರಣ ಮನನೊಂದ ವಿನೋಭಾ ಭಾವೆಯವರು ಈ ಕಾರ್ಯಕ್ರಮವನ್ನು ಕೈಬಿಟ್ಟರು. ಇದರಿಂದ ಮನನೊಂದ ಡಕಾಯಿತರು ಶರಣಾಗತಿಗಾಗಿ ಮತ್ತೆ ಮತ್ತೆ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದರು. ಕಳ್ಳರ ರೀತಿಯ, ಭಯದ ವಾತಾವರಣದ, ಶಾಂತಿ, ಸ್ವಾತಂತ್ರವಿಲ್ಲದ ಬದುಕಿಗಿಂತ ಪ್ರಾಣಿ, ಪಕ್ಷಿಗಳ ಬದುಕು ಮೇಲೆಂಬ   ಅಭಿಪ್ರಾಯಕ್ಕೆ ಅವರು ಬಂದಿದ್ದರು.

ಈ ಡಕಾಯಿತರಲ್ಲಿ ಬುದ್ಧ್ದಿವಂತರಿಗೇನೂ ಕಡಿಮೆ ಇರಲಿಲ್ಲ. ಹಾಗೆಯೇ, ಅವರಲ್ಲಿ ವಿಶ್ವಾಸಕ್ಕೂ ಬರವಿರಲಿಲ್ಲ. ತಹಶೀಲ್ದಾರ್ ಸಿಂಗ್ ಎಂಬ ಡಕಾಯಿತ ಗಲ್ಲಿಗೇರುವ ಮೊದಲು ವಿನೋಭಾ ಭಾವೆಯವರೊಂದಿಗೆ ಚರ್ಚಿಸಲು ಬಯಸಿದ. ವಿನೋಭಾ ಭಾವೆಯವರು ತಮ್ಮ ಸ್ನೇಹಿತರೊಬ್ಬರನ್ನು ಕಳುಹಿಸಿ ಕೊಟ್ಟು ಇವನೊಂದಿಗೆ ಮಾತುಕತೆ ನಡೆಸಿದರು. ಇದರ ಪ್ರಯತ್ನವಾಗಿ 20 ಜನ ಡಕಾಯಿತರು ವಿನೋಭಾ ಭಾವೆಯವರ ಸಮಕ್ಷಮದಲ್ಲಿ ಶರಣಾದರು.

1971ರ ಅವಧಿಯಲ್ಲಿ ಮಾಧೋಸಿಂಗ್ ಎಂಬಾತ ಮತ್ತೆ ವಿನೋಭಾ ಭಾವೆಯವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಟ್ಟು ತಮ್ಮನ್ನು ಮನುಷ್ಯರಾಗಿ ಬಾಳಲು ದಯೆ ತೋರಿಸಬೇಕೆಂದು ಕೋರಿಕೊಂಡ. ಆಗ ವಿನೋಭಾ ಭಾವೆಯವರು ‘‘ಈ ಕಾರ್ಯವನ್ನು ಈ ವಯಸ್ಸಿನಲ್ಲಿ ನಿರ್ವಹಿಸಲು ನಾನು ಸಶಕ್ತನಲ್ಲ. ಅದಕ್ಕಾಗಿ ನೀವು ಜಯಪ್ರಕಾಶ್ ನಾರಾಯಣ್‌ರನ್ನು ಕಂಡು ಮಾತನಾಡಿ, ನಿಮಗೆ ಅವರಿಂದ ಸಹಾಯಕವಾಗುತ್ತದೆ’’ ಎಂದು ೊಸದಾದ ದಾರಿಯನ್ನು ತೋರಿಸಿದರು.

           ಮಾಧೋಸಿಂಗ್ ತನ್ನ ಹೆಸರನ್ನು ರಾಮ್‌ಸಿಂಗ್ ಎಂದು ಬದಲಾಯಿಸಿ ಕೊಂಡು ಪೊಲೀಸರ ಕಣ್ಣು ತಪ್ಪಿಸಿ ಬಹಳ ಕಷ್ಟಪಟ್ಟು ಜೆ.ಪಿ.ಯವರನ್ನು ಭೇಟಿ ಮಾಡಿದ. ಮೊದಲ ಭೇಟಿಯಲ್ಲಿ ಅವನ ಪ್ರಯತ್ನ ಫಲಿಸಲಿಲ್ಲ. ಇದೇ ವೇಳೆಯಲ್ಲಿ ಬಾಂಗ್ಲಾ ದೇಶದ ಸಮಸ್ಯೆ ಜೆ.ಪಿ.ಯವರ ತಲೆಯಲ್ಲಿ ಕೊರೆಯುತ್ತಿತ್ತು. ಇದರಿಂದಾಗಿ ಈಗ ನನಗೆ ಈ ವಿಚಾರದಲ್ಲಿ ಗಮನ ನೀಡಲು ಸಾಧ್ಯವಿಲ್ಲವೆಂದರು. ಹಠ ಬಿಡದ ಮಾಧೋಸಿಂಗ್ ಮತ್ತೆ, ಮತ್ತೆ ಜೆ.ಪಿ.ಯವರನ್ನು ಭೇಟಿ ಮಾಡಿ ಡಕಾಯಿತರ ಸಮಸ್ಯೆಯನ್ನು ಪರಿಹರಿಸಿಕೊಡುವಲ್ಲಿ ತಾವು ಪ್ರಮುಖ ಪಾತ್ರ ವಹಿಸುವಂತೆ ಕೋರಿಕೊಂಡು ಕೊನೆಗೂ ಜೆ.ಪಿ.ಯವರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ.

  ಜೆ.ಪಿ.ಯವರು ಈ ಸಮಸ್ಯೆಯ ವಿಚಾರದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿಗಳಿಗೂ, ಪ್ರಧಾನ ಮಂತ್ರಿಯವರಿಗೂ ಹಾಗೂ ಕೇಂದ್ರ ಗೃಹ ಸಚಿವರಿಗೂ ಪತ್ರವನ್ನು ಬರೆದು, ಈ ಸಮಸ್ಯೆಯ ಪರವಾಗಿ ನಾನು ಹೋರಾಡಲು ಕ್ರಮ ಕೈಗೊಂಡರೆ ತಮ್ಮಿಂದ ನನಗೆ ದೊರೆಯಬಹುದಾದ ಸರಕಾರದ ಸಹಕಾರ ಮತ್ತು ಡಕಾಯಿತರ ಜೀವ ರಕ್ಷಣೆ, ಅವರ ಕುಟುಂಬಗಳ ಪುನರ್‌ವಸತಿ, ಅವರೆಲ್ಲರ ಬದುಕಿನ ದಾರಿಯ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ಎದುರಾಗಬಹುದಾದ ಕಾನೂನಿನ ಅಡ್ಡಿ, ಆತಂಕದ ಬಗ್ಗೆ ಸುವಿಸ್ತಾರವಾಗಿ ಚರ್ಚಿಸಿ, ನಂತರ ಈ ಕಾರ್ುಕ್ಕೆ ಕೈ ಹಾಕುವುದಾಗಿ ತಿಳಿಸಿದರು.

   ಭಾರತ ಸರಕಾರ ಮತ್ತು ಅಲ್ಲಿನ ರಾಜ್ಯ ಸರಕಾರಗಳಿಗೆ ದೊಡ್ಡ ತಲೆನೋವಾಗಿದ್ದ ಡಕಾಯಿತರ ವಿಚಾರ ಈ ರೀತಿ ಶಾಂತಿಯಿಂದ ಪರಿಹಾರವಾಗುವುದಾದರೆ ತಮ್ಮ ಅಡ್ಡಿ ಇಲ್ಲವೆಂದು ತಿಳಿಸಿ, ಈ ಸಂಬಂಧದಲ್ಲಿ ಜೆ.ಪಿ.ಯವರು ಹೇಳುವ ಎಲ್ಲಾ ಮಾತುಗಳಿಗೆ ಮತ್ತು ಅವರು ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿರುವುದಾಗಿ ಭರವಸೆ ಕೊಟ್ಟ ನಂತರ ಜೆ.ಪಿ. ಈ ಕಾರ್ಯಕ್ಕೆ ಕೈ ಹಾಕಿದರು.

       ಬುದ್ಧ ಅಂಗುಲಿಮಾಲನಂತಹ ರಾಕ್ಷಸನ ಮನಸ್ಸು ಪರಿವರ್ತಿಸಿ, ಮಾನವನಾಗಿಸಿದ ವಿಚಾರ ಚರಿತ್ರೆಯಲ್ಲಿ ಕೇಳಿದ್ದೆವು. ಆದರೆ ಜೆ.ಪಿ.ಯವರು ಚಂಬಲ್ ಕಣಿವೆಯಲ್ಲಿ ಮಾಡಿದ ಕಾರ್ಯ ವಿಶ್ವದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಮಹತ್ತರ ಸಾಧನೆ. ಒಂದೇ ಒಂದು ಗುಂಡು ಸಿಡಿಯಲಿಲ್ಲ. ದಬ್ಬಾಳಿಕೆ ಮೆರೆಯಲಿಲ್ಲ. ನಡೆದುದೆಲ್ಲ, ಸಂಬಂಧಗಳನ್ನು ಬೆಸೆಯುವಂತಹ ಕಾರ್ಯ, ಪ್ರೀತಿಯ ಧಾರೆ ಹರಿದದ್ದು, ಅನುಕಂಪದ ಕಣ್ಣೀರಧಾರೆ  ಹರಿದಿದ್ದು ಇಲ್ಲಿ ವರ್ಣಿಸಲು ಅಸಾಧ್ಯ.

ಜೆ.ಪಿ.ಯವರು ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಮೊದಲು ಕರಪತ್ರಗಳನ್ನು ಸಿದ್ಧಪಡಿಸಿಕೊಟ್ಟು ಡಕಾಯಿತರಿಗೆ ಸರಕಾರದಿಂದ ವಾಹನಗಳನ್ನು ಕೊಡಿಸಿ, ಈ ಕರಪತ್ರಗಳನ್ನು ಎಲ್ಲ ಕಡೆ ತಲುಪಿಸುವಂತೆ ಆದೇಶ ನೀಡಿದರು. ಈ ಆದೇಶದ ಮೇರೆಗೆ ಕರಪತ್ರಗಳನ್ನು ಹಂಚಿ ಮಾಧೋಸಿಂಗ್ ಮತ್ತು ಅವರ ಅನೇಕ ಗೆಳೆಯರು ಡಕಾಯಿತರ ಗುಂಪಿನ ನಾಯಕರೊಂದಿಗೆ ಚರ್ಚಿಸಿ ಒಂದೇ ಬಾರಿಗೆ ಜೆ.ಪಿ.ಯವರ ಸಮ್ಮುಖದಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗತಿಯಾಗಲು ಸಮ್ಮತಿಸಿದರು.

ಅಂದುಕೊಂಡಂತೆಯೇ 1972ರಲ್ಲಿ ಚೌರಾ ಎಂಬ ಪ್ರದೇಶದಲ್ಲಿ ಡಕಾಯಿತರ ಶರಣಾಗತಿ ನಡೆಯುವಂತಹ ಕಾರ್ಯಕ್ರಮ ನಿಗದಿಯಾಯಿತು. ಇದಕ್ಕೆ ಮೊದಲು ಜೆ.ಪಿ.ಯವರು ಶರಣಾಗತರಾಗುವ ಡಕಾಯಿತರಿಗೆ ಯಾವುದೇ ಕಾರಣಕ್ಕೂ ಹಿಂಸಿಸಬಾರದು ಮತ್ತು ಅವರಿಗೆ ಅತೀ ಹೆಚ್ಚು ಶಿಕ್ಷೆ ವಿಧಿಸಬಾರದು ಎಂಬೆಲ್ಲಾ ಷರತ್ತುಳನ್ನು ಸರಕಾರಕ್ಕೆ ಸಲ್ಲಿಸಿದರು.

ಹಾಗೆಯೇ, ‘‘ನಿಮ್ಮ ಜೀವಗಳ ರಕ್ಷಣೆಯೇ ನನ್ನ ಕರ್ತವ್ಯ, ನೀವು ನನ್ನ ಮಕ್ಕಳ ಸಮಾನ, ನೀವು ನನ್ನನ್ನು ನಂಬಿ’’ ಎಂದು ಡಕಾಯಿತರಲ್ಲಿ ವಿಶ್ವಾಸವನ್ನು ಮೂಡಿಸಿದರು. ಆದರೆ ತಾವು ಮಾಡಿರುವ ತಪ್ಪಿಗೆ ನಮಗೆ ಯಾವುದೇ ರೀತಿಯಲ್ಲಿ ಶಿಕ್ಷೆಯಾದರೂ ಸರಿಯೇ, ಒಟ್ಟಿನಲ್ಲಿ ನಾವು ಸ್ವತಂತ್ರವಾಗಿ ಮಾನವ ಜೀವಿಗಳಂತೆ ಬದುಕಬೇಕು, ಅದಕ್ಕಾಗಿ ನಾವು ಯಾವುದಕ್ಕೂ ಸಿದ್ಧರಿದ್ದೇವೆಂದು ಹೇಳಿದ ಡಕಾಯಿತರು ತಮ್ಮ ಮನಸ್ಸನ್ನು ಕಠಿಣಗೊಳಿಸಿಕೊಂಡಿದ್ದರು. ಮಾಧೋಸಿಂಗ್ ಗೆಳೆಯರಾದ ಜಗರೂಪಸಿಂಗ್, ಮೊಹರ್ ಸಿಂಗ್, ಮಖಾನ್ ಸಿಂಗ್ ಎಂಬ ನೂರಾರು ಡಕಾಯಿತರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಪೊಲೀಸರಿಗೆ ಜೆ.ಪಿ.ಯವರ ಮುಂದೆ ಶರಣಾಗಲು ನಿರ್ಧರಿಸಿದರು. 1972ರ ಮೇ 1ರಂದು ಚೌರಾ ಎಂಬ ಸ್ಥಳದಲ್ಲಿ ದೊಡ್ಡದಾದ ಶಾಮಿಯಾನವನ್ನು ನಿರ್ಮಿಸಲಾಯಿತು. ವೇದಿಕೆಯ ಒಂದು ಕಡೆ ಕುರ್ಚಿಯ ಮೇಲೆ ಜೆ.ಪಿ. ಮತ್ತು ಅವರ ಪತ್ನಿ ಪ್ರಭಾವತಿ ಆಸೀನರಾಗಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನೇಕ ಗಣ್ಯರು ವೇದಿಕೆಯ ಮುಂಭಾಗದಲ್ಲಿ ಅವಿಸ್ಮರಣೀಯವಾದ ಐತಿಹಾಸಿಕ ಕ್ಷಣಕ್ಕಾಗಿ ಕಣ್ಣುಗಳನ್ನು ಮಿಟುಕಿಸದೇ ಕಾಯುತ್ತಿದ್ದರು.

     ಈ ಸಂದರ್ಭದಲ್ಲಿ ಜೆ.ಪಿ.ಯವರು ಮಾಡಿದ ಭಾಷಣ ಅದ್ಭುತವಾಗಿತ್ತು. ‘‘ಹುಟ್ಟಿನಿಂದಲೇ ಯಾರೂ ಅಪರಾಧಿಗಳಲ್ಲ. ಅಪರಾಧವೆನ್ನುವುದು ಒಂದು ಕಾಯಿಲೆ. ಪಿಸ್ತೂಲು, ಗುಂಡುಗಳು ಇದಕ್ಕೆ ಔಷಧವಲ್ಲ. ಪ್ರೀತಿ ವಿಶ್ವಾಸ, ಮಮತೆ, ಅನುಕಂಪ ಇವರ ತಪ್ಪುಗಳನ್ನು ತಿದ್ದಬಲ್ಲದು’’ ಎಂದು ವಿಚಾರಗಳ ಹೊಳೆಯನ್ನೇ ಹರಿಸಿದರು. ಜೆ.ಪಿ.ಯವರ ಮಾತು ಎಲ್ಲರ ಮನಸ್ಸಿಗೂ ನಾಟಿತು.

    ಈ ಸುಂದರ ಕ್ಷಣಗಳನ್ನು ಕಾಣುತ್ತಿದ್ದ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ನೀರು ಸುರಿಯಿತು. ಕಲ್ಲು ಬಂಡೆಯಂತಹ ಮನಸ್ಸಿನ ಡಕಾಯಿತರು ಜೆ.ಪಿ.ಯವರ ಎದುರು ಹೂವಾಗಿ ಬದಲಾದದ್ದು ಅದ್ಭುತ. ನಿಜಕ್ಕೂ ಜೆ.ಪಿ. ಸಾಮಾನ್ಯ ಮಾನವರಲ್ಲ, ಲೋಕನಾಯಕ, ಸಮಾಜ ಸುಧಾರಕ, ಒಬ್ಬ ದೊಡ್ಡ ಪ್ರವಾದಿ ಎಂಬೆಲ್ಲಾ ಮಾತುಗಳು ನೆರೆದವರ ಬಾಯಿಯಿಂದ ಹೊರಬಂತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜೆ.ಪಿ. ಯವರ ಈ ಮಹಾನ್ ಕಾರ್ಯಕ್ಕೆ ತುಂಬು ಹೃದಯದಿಂದ ಕೃತಜ್ಞತೆಗನ್ನು ಸಲ್ಲಿಸಿತ್ತು.

   ಪೊಲೀಸರ ವ್ಯಾನುಗಳನ್ನು ಹತ್ತಿದ ಡಕಾಯಿತರು ಮತ್ತೊಮ್ಮೆ ಜೆ.ಪಿ. ಯವರತ್ತ ಕೈ ಬೀಸಿದರು. ಇದಕ್ಕೆ ಪ್ರತಿಯಾಗಿ ಜೆ.ಪಿ.ಯವರು ನಾನು ನಿಮ್ಮೆಂದಿಗೆ ಇದ್ದೇನೆಂಬ ಭರವಸೆಯನ್ನು ತಮ್ಮ ಭಾವನೆಯಿಂದ ಹೊರ ಹಾಕಿದರು. ಈ ರೀತಿ ಶರಣಾದ ಡಕಾಯಿತರ ಯೋಗ ಕ್ಷೇಮ, ಅವರ ಮೇಲೆ ತೆಗೆದುಕೊಂಡಿರುವ ಕಾನೂನಿನ ಕ್ರಮ, ಅವರ ಬಿಡುಗಡೆಯ ವಿಚಾರ ಎಲ್ಲದರಲ್ಲಿಯೂ ಜೆ.ಪಿ. ಆಸಕ್ತಿಯಿಂದ ಶ್ರದ್ಧೆಯಿಂದ ಗಮನಹರಿಸಿದರು. ಚಂಬಲ್ ಕಣಿವೆಗೆ ಬೆಳಕು ನೀಡಿದ ಈ ಮಹಾನ್ ಕಾರ್ಯದ ಹಿಂದಿನ ಜೆ.ಪಿ.ಯವರ ಶ್ರಮವನ್ನು ದೇಶದ ನಾಗರಿಕ ಸಮಾಜ ಎಂದೂ ಮರೆಯ ಬಾರದು.

Similar News