ಮುಂಬೈ ವಿರುದ್ಧ ಕರ್ನಾಟಕಕ್ಕೆ 9 ರನ್ ಜಯ

Update: 2019-10-11 04:41 GMT

►ವಿಜಯ ಹಝಾರೆ ಟ್ರೋಫಿ

ಬೆಂಗಳೂರು, ಅ.10: ಸರ್ವಾಂಗೀಣ ಪ್ರದರ್ಶನ ನೀಡಿದ ಕರ್ನಾಟಕ ತಂಡ ವಿಜಯ ಹಝಾರೆ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಮುಂಬೈ ವಿರುದ್ಧ 9 ರನ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.

 ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಮುಂಬೈ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್(58, 57 ಎಸೆತ), ದೇವದತ್ತ ಪಡಿಕ್ಕಲ್(79, 85 ಎಸೆತ)ಹಾಕಿಕೊಟ್ಟ ಭದ್ರಬುನಾದಿಯ ಸಹಾಯದಿಂದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 312 ರನ್ ಗಳಿಸಿತು.

ಗೆಲ್ಲಲು 313 ರನ್ ಬೆನ್ನಟ್ಟಿದ ಮುಂಬೈ ತಂಡ 48.1 ಓವರ್‌ಗಳಲ್ಲಿ 303 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.ಶಿವಂ ದುಬೆ ಮಿಂಚಿನ ಶತಕ(118, 67 ಎಸೆತ, 7 ಬೌಂಡರಿ, 10 ಸಿಕ್ಸರ್)ಸಿಡಿಸಿದರೂ ಮುಂಬೈಗೆ ಗೆಲುವು ಒಲಿಯಲಿಲ್ಲ. ಅಭಿಮನ್ಯು ಮಿಥುನ್(3-40), ಕೃಷ್ಣಪ್ಪ ಗೌತಮ್(3-51)ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಪ್ರಸಿದ್ಧ ಕೃಷ್ಣ(2-39)ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಮುಂಬೈ ಪರ ಸಿದ್ಧೇಶ್ ಲಾಡ್(34), ಆದಿತ್ಯ ತಾರೆ(32), ಸೂರ್ಯಕುಮಾರ ಯಾದವ್(26) ಹಾಗೂ ಶಾರ್ದೂಲ್ ಠಾಕೂರ್(26)ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕಕ್ಕೆ ರಾಹುಲ್(58, 57 ಎಸೆತ, 9 ಬೌಂಡರಿ) ಹಾಗೂ ಪಡಿಕ್ಕಲ್(79, 85 ಎಸೆತ, 10 ಬೌಂಡರಿ, 1 ಸಿಕ್ಸರ್)22.2 ಓವರ್‌ಗಳಲ್ಲಿ 137 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ನಾಯಕ ಮನೀಷ್ ಪಾಂಡೆ ಅರ್ಧಶತಕದ ಕೊಡುಗೆ(62, 64ಎಸೆತ, 3 ಬೌಂಡರಿ, 2 ಸಿಕ್ಸರ್)ನೀಡಿದರು. ರೋಹನ್ ಕದಂ(32), ಶರತ್(28), ಗೌತಮ್(ಔಟಾಗದೆ 22)ಎರಡಂಕೆಯ ಸ್ಕೋರ್ ಗಳಿಸಿ ತಂಡದ ಮೊತ್ತವನ್ನು 312ಕ್ಕೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News