ಚೆಕ್ ಪೋಸ್ಟ್ ಗಳಲ್ಲಿ ಪ್ರವಾಸಿಗರಿಂದ ಶುಲ್ಕ ವಸೂಲಿ ತಡೆಯಲು ಚಿಕ್ಕಮಗಳೂರು ಜಿಲ್ಲಾಧಿಕಾರಿ ಸೂಚನೆ

Update: 2019-10-11 18:31 GMT

ಚಿಕ್ಕಮಗಳೂರು, ಅ.11: ನಗರ ಸಮೀಪದ ಅಲ್ಲಂಪುರ ಗ್ರಾಪಂ ವ್ಯಪ್ತಿಯಯಲ್ಲಿರುವ ಕೈಮರ ಚೆಕ್‍ಪೋಸ್ಟ್ ನಲ್ಲಿ ಪ್ರವಾಸಿಗರಿಂದ ಅಕ್ರಮವಾಗಿ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚೆಕ್ ಪೋಸ್ಟ್ ಗಳಲ್ಲಿ ಶುಕ್ರವಾರದಿಂದ ವಾಹನಗಳ ಪ್ರವೇಶ ಶುಲ್ಕ ವಸೂಲಾತಿ ತಡೆಯುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೈಮರ ಚೆಕ್ ಪೋಸ್ಟ್ ನಲ್ಲಿ ವಾಹನ ಪ್ರವೇಶ ಶುಲ್ಕ ವಸೂಲಾತಿ ಹಾಗೂ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಲಂಪುರ ಗ್ರಾಮ ಪಂಚಾಯತ್ ವತಿಯಿಂದ ಕೈಮರ ಇನ್ನಿತರ ಚೆಕ್ ಪೋಸ್ಟ್‍ಗಳಲ್ಲಿ ವಾಹನ ಶುಲ್ಕ ವಸೂಲಾತಿ ಮಾಡುತ್ತಿದ್ದು, ಶುಲ್ಕ ವಸೂಲಾತಿ ಮಾಡುವುದಕ್ಕೆ ಕಾನೂನಿನ ಅನ್ವಯ ಗ್ರಾಮ ಪಂಚಾಯತ್‍ಗೆ ಯಾವುದೇ ಹಕ್ಕು ಇಲ್ಲ. ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಇಂದಿನಿಂದಲೇ ಗ್ರಾಪಂ ಶುಲ್ಕ ವಸೂಲಾತಿ ಮಾಡುವುದನ್ನು ನಿಲ್ಲಿಸಬೇಕು. ಈ ಹಿಂದೆ ಚೆಕ್ ಪೋಸ್ಟ್ ಕುರಿತಾಗಿ ಕರೆದ ಟೆಂಡರನ್ನು ಕೂಡಲೇ ರದ್ದು ಪಡಿಸಬೇಕು. ಈ ಕುರಿತು ಜಿಲ್ಲಾ ಪಂಚಾಯತ್ ಸಿ.ಇ.ಒ ಶುಲ್ಕ ವಸೂಲಾತಿ ಮಾಡದಂತೆ ಲಿಖಿತವಾಗಿ ಆದೇಶ ಹೊರಡಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ಪಡೆದರು.

ಅಲ್ಲಂಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ರೆಸಾರ್ಟ್‍ಗಳ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾಡಳಿತಕ್ಕೆ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಅಂತಹ ರೆಸಾರ್ಟ್‍ಗಳನ್ನು 24 ಗಂಟೆಗಳಲ್ಲಿ ತೆರವುಗೊಳಿಸಬೇಕು. ಅಂತಹ ರೆಸಾರ್ಟ್‍ಗಳಿಗೆ ಗ್ರಾಮ ಪಂಚಾಯತ್ ವತಿಯಿಂದ ನೀರು, ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ನೀಡಿರುವುದನ್ನು ಕೂಡಲೇ ಕಡಿತಗೊಳಿಸಬೇಕು ಎಂದು ತಾಲೂಕು ಪಂಚಾಯತ್ ಇಒ ಹಾಗೂ ಅಲ್ಲಂಪುರ ಗ್ರಾಮ ಪಂಚಾಯತ್ ಪಿ.ಡಿ.ಒ ಗೆ ಸೂಚಿಸಿದರು.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಪ್ರದೇಶಗಳ ಸ್ವಚ್ಛತೆಯ ದೃಷ್ಠಿಯಿಂದ ಲಿಕ್ಕರ್, ಪ್ಲಾಸ್ಟಿಕ್ ಹಾಗೂ ಪರಿಸರಕ್ಕೆ ವ್ಯತಿರಿಕ್ತವಾಗಿ ಹಾನಿ ಉಂಟುಮಾಡುವ ತ್ಯಾಜ್ಯ ವಸ್ತುಗಳನ್ನು ಗಿರಿ ಪ್ರದೇಶಗಳಿಗೆ ಪ್ರವಾಸಿಗರು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಬೇಕು. ಈ ಬಗ್ಗೆ ಪ್ರವಾಸಿಗರಿಂದ ದೂರುಗಳು ಕೇಳಿ ಬರುತ್ತಿರುವುದರಿಂದ ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಿ ಇಂತಹ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಗಿರಿ ಪ್ರದೇಶಗಳಲ್ಲಿ ತಾತ್ಕಾಲಿಕ ಶೆಡ್ ಹಾಗೂ ಬಂಡಿ ಅಂಗಡಿಗಳಿಗೆ ಗ್ರಾಮ ಪಂಚಾಯತ್ ನಿಬಂಧನೆಯಂತೆ ಅನುಮತಿ ಪಡೆದು ನಡೆಸುತ್ತಿರುವ ಶೆಡ್‍ಗಳನ್ನು ಬಿಟ್ಟು ಅನುಮತಿ ಇಲ್ಲದೆ ನಡೆಸುತ್ತಿರುವ ಅಂಗಡಿಗಳನ್ನು ಮುಚ್ಚುವಂತೆ ನೋಟಿಸ್ ನೀಡಬೇಕು ಎಂದು ಅಲ್ಲಂಪುರ ಗ್ರಾಪಂ ಪಿಡಿಓ ಅವರಿಗೆ ಡಿಸಿ ಇದೇ ವೇಳೆ ಸೂಚನೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ಮುಳಯ್ಯನಗಿರಿಯಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಳ್ಳುವುದಕ್ಕೆ 17 ಜನರು ಗ್ರಾಮ ಪಂಚಾಯತ್‍ನಿಂದ ಅನುಮತಿ ಪಡೆದಿದ್ದಾರೆ. ಅಲ್ಲದೇ ಅಲ್ಲಿನ ತಿಂಡಿ ತಿನಿಸುಗಳ ತ್ಯಾಜ್ಯಗಳನ್ನು ಅವರೆ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ. ಅನುಮತಿ ಪಡೆಯದೆ ಇರುವ ಅಂಗಡಿಗಳನ್ನು ತೆರವುಗೊಳಿಸಿಲಾಗುವುದು ಎಂದು ತಿಳಿಸಿದರು.

ಹಿರೇಕೊಳಲೆ ಗ್ರಾಮದ ಪ್ರವಾಸಿ ತಾಣಗಳ ಅಭಿವೃದ್ದಿ ದೃಷ್ಟಿಯಿಂದ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ. ಅಧಿಕಾರಿಗಳು ಇಂತಹ ಸ್ಥಳಗಳ ಕುರಿತು ನಿಗಾವಹಿಸಿ ಅಲ್ಲಿನ ಸ್ವಚ್ಛತೆಯನ್ನು ಕಾಪಾಡಬನೇಕು. ಗಿರಿ ಪ್ರದೇಶಗಳಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದ್ದು, ಅಲ್ಲಂಪುರ ಗ್ರಾಪಂ ವತಿಯಿಂದ ಮೂರು ದಿನಕ್ಕೊಮ್ಮೆ ಕಸ ಸಂಗ್ರಹಿಸಿ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್‍ ಪಾಂಡೆ ಮಾತನಾಡಿ, ಶೇ.50ರಷ್ಟು ಪ್ರವಾಸಿಗರು ಲಿಕ್ಕರ್ ಗಳನ್ನು ಗಿರಿ ಪ್ರದೇಶಗಳಿಗೆ ತೆಗದುಕೊಂಡು ಹೋಗುವುದು ಗಮನಕ್ಕೆ ಬಂದಿರುವುದರಿಂದ ಚೆಕ್ ಪೋಸ್ಟ್ ಗಳ ಹತ್ತಿರ 20 ಮೇಟಲ್ ಲಾಕರ್ ಗಳನ್ನು ಅಳವಡಿಸಬೇಕು. ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಿ.ಸಿ ಕ್ಯಾಮರಗಳನ್ನು ಅಳವಡಿಸಬೇಕು ಎಂದು ತಿಳಿಸಿದ ಅವರು, ವಾಹನಗಳ ಶುಲ್ಕ ವಸೂಲಾತಿ ರಶೀದಿಯಲ್ಲಿ ಯಾವುದೇ ಸೀಲ್, ಸಹಿ ಇಲ್ಲದಿರುವುದು ಕಂಡುಬಂದಿದ್ದು, ಇದನ್ನು ನಿಯಂತ್ರಿಸಲು ಟೈಮ್, ಡೆಟ್ ಇರುವಂತಹ ಆಟೋಮೆಟಿಕ್ ರಶೀದಿ ವ್ಯವಸ್ಥೆಯನ್ನು ಮಾಡಬೇಕೆಂಬುದನ್ನು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಡಿ.ಸಿ.ಎಫ್ ಸಂತೋಷ್ ಕುಮಾರ್, ಎ.ಸಿ.ಎಫ್ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ಶಿಲ್ಪಾ, ವಿ.ಎಫ್.ಸಿ ಸಮಿತಿಯ ಸದಸ್ಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News