ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಹಲವರ ಬಂಧನ, ಬಿಡುಗಡೆ

Update: 2019-10-11 18:53 GMT

ತುಮಕೂರು,ಅ.11: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರ ಟೌನ್‍ಹಾಲ್‍ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ದೇಶದಲ್ಲಿ ಕಾಂಗ್ರೆಸ್ ನಾಯಕರನ್ನು ಹೊರತು ಪಡಿಸಿದರೆ ಬೇರೆ ಪಕ್ಷಗಳ ಮುಖಂಡರುಗಳ ವಿದ್ಯಾಸಂಸ್ಥೆಗಳಿದ್ದರೂ, ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ್ ಹಾಗೂ ಆರ್.ಎಲ್. ಜಾಲಪ್ಪ ಅವರ ವಿದ್ಯಾಸಂಸ್ಥೆಗಳ ಮೇಲೆ ಮಾತ್ರ ಐಟಿ ದಾಳಿ ಮಾಡಿರುವುದು ಏಕೆ? ಎಂದು ಪ್ರಶ್ನಿಸಿದರು.

ದೇಶದಲ್ಲಿರುವ ಕೆಲವೇ ಕೆಲವು ದಲಿತರ ವಿದ್ಯಾಸಂಸ್ಥೆಗಳಲ್ಲಿ ಸಿದ್ದಾರ್ಥ ವಿದ್ಯಾಸಂಸ್ಥೆಯೂ ಒಂದಾಗಿದ್ದು, ದಲಿತರ ಏಳ್ಗೆಯನ್ನು ಸಹಿಸದ ಬಿಜೆಪಿ ಐಟಿ ಮೂಲಕ ಶಿಕ್ಷಣ ಸಂಸ್ಥೆಗೆ ಮಸಿ ಬಳಿಯುವ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕರ ಆತ್ಮಸ್ಥೈರ್ಯ ವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆ ಅಂಗವಾಗಿ ರಸ್ತೆ ನಡೆಸಿದ ಮುಖಂಡರಾದ ಚಂದ್ರಶೇಖರ್ ಗೌಡ ಹಾಗೂ ಇತರರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಜಿ.ಪಂ.ಸದಸ್ಯರಾದ ಕೆಂಚಮಾರಯ್ಯ, ನಾರಾಯಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆಟೋರಾಜು, ಮೆಹಬೂಬ್‍ಪಾಷ, ಅರಕೆರೆ ಶಂಕರ್, ಬಲರಾಮಯ್ಯ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹ್ಮದ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ, ನಾಗಮಣಿ ಸೇರಿದಂತೆ ಇತರರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News