ಸ್ಪೀಕರ್ ಬಿಜೆಪಿ ಸದಸ್ಯರ ರೀತಿ ಕಾರ್ಯ ನಿರ್ವಹಿಸುತ್ತಿರುವುದು ಸಲ್ಲ: ಸಿದ್ದರಾಮಯ್ಯ ಆಕ್ಷೇಪ

Update: 2019-10-12 11:28 GMT

ಬೆಂಗಳೂರು, ಅ. 12: ಅಧಿಕಾರ ವಹಿಸಿಕೊಂಡ ಕೂಡಲೇ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ ದಮನ ಮಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮೊದಲ ದಿನದಿಂದಲೇ ಬಿಜೆಪಿ ಸದಸ್ಯರ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಸ್ಪೀಕರ್ ಕಾಗೇರಿಯವರ ಜೊತೆ ನನಗೆ ವೈಯಕ್ತಿಕ ಜಗಳವೇನಿಲ್ಲ. ವಿಧಾನ ಮಂಡಲದ ಶಿಷ್ಟಾಚಾರ-ನಡವಳಿಕೆಗಳ ಬಗ್ಗೆ ನನಗೂ ತಿಳಿದಿದೆ. ಆದರೆ, ಅವರ ಕಾರ್ಯವೈಖರಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ.

‘ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಆಡಳಿತ ಪಕ್ಷದ ಸದಸ್ಯರು, ಸರಕಾರದ ವೈಫಲ್ಯದ ಬಗ್ಗೆ ಆಡಿದ ಮಾತುಗಳು ಮತ್ತು ಅವರ ಮುಖಗಳನ್ನು ಸರಕಾರಿ ಕೃಪಾಪೋಷಿತ ಡಿಡಿ ಚಂದನ ಸುದ್ದಿವಾಹಿನಿ ಸೆನ್ಸಾರ್ ಮಾಡಿ ಬಿತ್ತರಿಸುತ್ತಿರುವುದು ಖಂಡನೀಯ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ವಿರೋಧಪಕ್ಷಗಳ ದನಿಯನ್ನು ದಮನಿಸಿ ಆಡಳಿತ ಪಕ್ಷಕ್ಕೆ ನೆರವಾಗುವ ಉದ್ದೇಶದಿಂದಲೇ ಸ್ಪೀಕರ್ ಕಾಗೇರಿ ಅವರು ಖಾಸಗಿ ಸುದ್ದಿವಾಹಿನಿಗಳ ಟಿವಿ ಕ್ಯಾಮೆರಾಗಳಿಗೆ ನಿರ್ಬಂಧ ಹೇರಿರುವುದು ಕಳೆದೆರಡು ದಿನಗಳ ಕಲಾಪದಿಂದ ಸ್ಪಷ್ಟವಾಗಿದೆ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News