ಅರಣ್ಯಾಧಿಕಾರಿಗೆ ಬೆದರಿಕೆ ಆರೋಪ: ಬಿಜೆಪಿ ಯುವ ಮೋರ್ಚಾ ಮುಖಂಡನ ವಿರುದ್ಧ ಎಫ್‍ಐಆರ್

Update: 2019-10-12 12:17 GMT

ಶಿವಮೊಗ್ಗ, ಅ.12: ಅರಣ್ಯಾಧಿಕಾರಿಯೋರ್ವರ ಮೊಬೈಲ್‍ಗೆ ಕರೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾದ ಮುಖಂಡನ ವಿರುದ್ದ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. 

ಶಂಕರ ಅರಣ್ಯ ವಲಯದ ಆರ್‍ಎಫ್‍ಓ ಕೆ.ಸಿ.ಜಯೇಶ್‍ರವರು ಶುಕ್ರವಾರ ಸಂಜೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ಗಿರಿರಾಜ್ ವಿರುದ್ದ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 504, 506, 186, 353 ರ ಅಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಬಂಧನ ಸಾಧ್ಯತೆ ದಟ್ಟವಾಗಿದೆ. 

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರ್‍ಎಫ್‍ಓ ಕೆ.ಸಿ.ಜಯೇಶ್‍ರವರು ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಿದ್ದಾರೆ.

ಘಟನೆ ಹಿನ್ನೆಲೆ: ಗಾಜನೂರು ಗ್ರಾಮದ ಗಣಪತಿ ದೇವಾಲಯ ಮುಂಭಾಗವಿದ್ದ ಮೂರು ಮರಗಳನ್ನು ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಕಡಿದಿದ್ದರು. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ಬಂದಿತ್ತು. ಇದರ ಆಧಾರದ ಮೇಲೆ ತುಂಗಾ ಮೇಲ್ದಂಡೆ ಯೋಜನೆ ಎ.ಇ.ಇ. ಕುಮಾರಸ್ವಾಮಿಯವರ ವಿರುದ್ಧ ಆರ್‍ಎಫ್‍ಓ ಕೆ.ಸಿ.ಜಯೇಶ್‍ ರವರು ಪ್ರಕರಣ ದಾಖಲಿಸಿಕೊಂಡು, ನೊಟೀಸ್ ಕೂಡ ಜಾರಿಗೊಳಿಸಿದ್ದರು. 

ಎ.ಇ.ಇ. ಕುಮಾರಸ್ವಾಮಿಯವರ ಪರವಾಗಿ, ಬಿಜೆಪಿ ಮುಖಂಡ ಗಿರಿರಾಜ್‍ರವರು ಆರ್‍ಎಫ್‍ಓ ಜಯೇಶ್‍ರವರ ಮೊಬೈಲ್‍ಗೆ ಕರೆ ಮಾಡಿದ್ದರು. ಅಶ್ಲೀಲ ಪದ ಬಳಸಿ ಏಕವಚನದಲ್ಲಿ ಕೂಗಾಡಿದ್ದರು. ಈ ಆಡಿಯೋ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News