ಬಂಡೀಪುರ: ಕಾರ್ಯಾಚರಣೆ ನಡುವೆಯೂ ಆನೆ ಮರಿಯನ್ನು ಕೊಂದ ಹುಲಿ

Update: 2019-10-12 13:13 GMT

ಚಾಮರಾಜನಗರ, ಅ.12: ಇಬ್ಬರು ರೈತರನ್ನು ಬಲಿ ತೆಗೆದುಕೊಂಡ ಹುಲಿ ಸೆರೆಗೆ ಹರ ಸಾಹಸ ಪಡುತ್ತಿರುವ ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ನಡುವೆಯೇ ನವಜಾತ ಆನೆ ಮರಿಯನ್ನು ಹುಲಿ ಕೊಂದಿದ್ದು, ಇದೀಗ ಹುಲಿ ಸೆರೆ ಕಾರ್ಯಾಚರಣೆ ಚುರುಕಾಗಿದೆ.

ಕರ್ನಾಟಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ವಿಸ್ತಾರವಾಗಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದಲ್ಲಿ ನರಭಕ್ಷಕ ಹುಲಿ ಸೆರೆಗೆ ಅರಣ್ಯಾಧಿಕಾರಿಗಳು ಭಾರಿ ಕಸರತ್ತಿನಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರೈತರನ್ನು ಬಲಿ ತೆಗೆದುಕೊಂಡ ಹೆಬ್ಬುಲಿ ಶನಿವಾರ ಮುಂಜಾನೆ 4.42 ರ ಸಮಯದಲ್ಲಿ ಮಗುವಿನಹಳ್ಳಿ ಸಮೀಪದ ಕಾಡಿನಲ್ಲಿ ಸಂಚಾರ ಮಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದ್ದರಿಂದ, ಮಗುವಿನಹಳ್ಳಿ ಬಳಿ ಕಾರ್ಯಾಚರಣೆ ಚುರುಕಾಗಿದೆ. ಇದೇ ವೇಳೆ ಹುಲಿಯು ಆನೆ ಮರಿಯನ್ನು ತಿಂದಿರುವುದರ ಬಗ್ಗೆ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಸ್ಪಷ್ಟ ಪಡಿಸಿದ್ದು, ಆನೆ ಮರಿಯನ್ನು ತಿಂದ ಹುಲಿಯನ್ನು ಆನೆಗಳು ಓಡಿಸಿದ ಗುರುತುಗಳು ಕಾಡಿನಲ್ಲಿ ಪತ್ತೆಯಾಗಿವೆ ಎಂದರು.

ಮೈಸೂರು ಜಿಲ್ಲೆಯ ನಾಗರಹೊಳೆಯ ತಿತಿಮತಿ ಆನೆ ಶಿಬಿರದಿಂದ ಗಣೇಶನನ್ನು ಕೂಬಿಂಗ್ ಗೆ ಕರೆಸಲಾಗಿದ್ದು, ಮಗುವಿನಹಳ್ಳಿ ಸಮೀಪದಲ್ಲಿ ಅಭಿಮನ್ಯು, ಗಣೇಶ ಹಾಗೂ ಗೋಪಾಲಸ್ವಾಮಿ ಆನೆಗಳನ್ನು ಬಳಕೆ ಮಾಡಿಕೊಂಡು ಕೂಬಿಂಗ್ ನಡೆಸಲಾಗುತ್ತಿದೆ. ಈ ನಡುವೆ ಅರಣ್ಯ ಇಲಾಖೆಯ ಅಪರಾಧಗಳನ್ನು ಪತ್ತೆ ಹಚ್ಚುವ ಚಾತುರ್ಯ ಇರುವ ರಾಣಾ ಎಂಬ ಶ್ವಾನವನ್ನು ಕೂಡಾ ಹುಲಿ ಹೆಜ್ಜೆ ಗುರುತು ಪತ್ತೆಗೆ ಬಳಕೆ ಮಾಡಿಕೊಳ್ಳಲಾಗಿದೆ.

ಹುಲಿಸೆರೆ ಕಾರ್ಯಾಚರಣೆಯಲ್ಲಿ ಏಳು ಸಾಕಾನೆಗಳು, 'ರಾಣಾ' ಬಳಕೆ ಮಾಡಿಕೊಳ್ಳುವ ಜೊತೆಗೆ ಬಿಳಿಗಿರಿರಂಗನ ಬೆಟ್ಟದ ನಾಲ್ವರು ಗಿರಿ ಜನರನ್ನು ಕೂಬಿಂಗ್ ಗೆ ಸಹಾಯಕರಾಗಿ ಅರಣ್ಯ ಇಲಾಖೆ ನಿಯೋಜಿಸಿಕೊಂಡಿದೆ.

ಘಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ ನೀಡಿದ್ದು, ಹುಲಿ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸಾಂತ್ವಾನ ಹೇಳಿದ ಬಳಿಕ, ಹುಲಿಸೆರೆ ಕಾರ್ಯಾಚರಣೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ಒಂದೂವರೆ ತಿಂಗಳಲ್ಲಿ ಇಬ್ಬರು ರೈತರನ್ನು ಕಾಡಿನಲ್ಲಿ ತಿಂದು ಹಾಕಿದ್ದು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹುಲಿಯಲ್ಲ ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದ್ದು, ಹುಲಿಯು ಮೈಸೂರಿನ ನಾಗರಹೊಳೆ ಹುಲಿ ಯೋಜನೆಯ ಅಂತರಸಂತೆಯ ಹುಲಿ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ವಾಸ ಸ್ಥಾನಕ್ಕಾಗಿ ಅಲೆಯುತ್ತಿರುವ ಹುಲಿ ನಾಗರಹೊಳೆ ಕಡೆಯಿಂದ ಬಂಡೀಪುರಕ್ಕೆ ಬಂದಿದೆ ಎನ್ನುವುದು ಖಾತ್ರಿಯಾಗಿದೆ ಎಂದು ಹೇಳಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಸೆರೆಗಾಗಿ ನಡೆಸುತ್ತಿರುವ ಕೂಂಬಿಂಗ್ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಹಾಗೂ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವ ಸಲುವಾಗಿ ಕಾರ್ಯಾಚರಣೆ ವ್ಯಾಪ್ತಿ ಹಾಗೂ ಚೌಡಹಳ್ಳಿ, ಹುಂಡೀಪುರ ದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದು, ಕಾರ್ಯಾಚರಣೆ ಯಶಸ್ವಿಯಾಗುವ ತನಕ 144 ಸೆಕ್ಷನ್ ಜಾರಿಯಲ್ಲಿರುತ್ತದೆ. 

-ಬಿ.ಬಿ. ಕಾವೇರಿ, ಜಿಲ್ಲಾಧಿಕಾರಿ, ಚಾಮರಾಜನಗರ

ಈಗಾಗಲೇ ಹುಲಿ ಸೆರೆಗೆ ತೀವ್ರ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಏಳು ಸಾಕಾನೆಗಳು, ರಾಣಾ ಶ್ವಾನದ ಜೊತೆಗೆ ದ್ರೋಣ್ ಬಳಕೆ ಮಾಡಿದರೂ ಹುಲಿ ಎಲ್ಲಿದೆ ಎನ್ನುವುದು ಸರಿಯಾಗಿ ತಿಳಿದು ಬರುತ್ತಿಲ್ಲ. ಈ ನಡುವೆ ಮಗುವಿನಹಳ್ಳಿ ಬಳಿಯ ಕಾಡಿನಲ್ಲಿ ನವಜಾತ ಆನೆ ಮರಿಯನ್ನು ಶನಿವಾರ ಮುಂಜಾನೆ ಹುಲಿ ತಿಂದಿದ್ದು, ಈ ಬಗ್ಗೆ ಅರಣ್ಯ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಇದೀಗ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ.

-ಟಿ.ಬಾಲಚಂದ್ರ, ನಿರ್ದೇಶಕರು, ಬಂಡೀಪುರ ಹುಲಿಯೋಜನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News