ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ?: ಬಿಜೆಪಿ ಕಾರ್ಯಕರ್ತನ ಆರೋಪ

Update: 2019-10-13 14:46 GMT

ಬೆಂಗಳೂರು, ಅ. 13: ‘ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ ನಡೆಯುತ್ತಿದ್ದು, ಲಿಂಗಾಯತರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರನ್ನು ಮತ್ತವರ ಬೆಂಬಲಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಬಿಜೆಪಿ ಕಾರ್ಯಕರ್ತ ನಂಜುಂಡಸ್ವಾಮಿ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಬಿಜೆಪಿ ನೂತನ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಐದಾರು ಮಂದಿ ಬಿಎಸ್‌ವೈ ಆಪ್ತರೆಂದು ರಾಜ್ಯ ಬಿಜೆಪಿ ಕಚೇರಿಯ ಕೆಲಸದಿಂದ ತೆಗೆದುಹಾಕಲಾಗಿದೆ. ಅಲ್ಲದೆ, ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಿದ್ದಾರೆ. ಸಿಎಂ ಯಡಿಯೂರಪ್ಪನವರ ಬೆಂಬಲಿಗರು ಎಂಬ ಕಾರಣಕ್ಕೆ ಪಕ್ಷದಲ್ಲಿ ಭೇದ-ಭಾವ ಮಾಡಲಾಗುತ್ತಿದೆ. ಈ ಹಿಂದೆ ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ತೆಗೆದಿದ್ದಾರೆ’ ಎಂದು ಆರೋಪಿಸಿದ್ದಾರೆ.

14 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು ಸಾರ್ಥಕವಾಯ್ತು ಎಂದುಕೊಂಡಿದ್ದೆ. ಆದರೆ ಅದು ಸಾರ್ಥಕವಾಗಿಲ್ಲ. ಬಿಜೆಪಿ ನಮ್ಮ ಹೆತ್ತ ತಾಯಿ ಎಂದು ತಿಳಿದುಕೊಂಡಿದ್ದೆವು. ಬಿಎಸ್‌ವೈ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಪಕ್ಷವನ್ನು ಬೆಳೆಸಿದರು. ಆದರೆ ಈಗಿನ ಅಧ್ಯಕ್ಷರು ಲಿಂಗಾಯತರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಏಕಾಏಕಿ ಕೆಲಸದಿಂದ ಕೆಲಸಗಾರರನ್ನು ತೆಗೆದು ಹಾಕಿದರೆ ಅವರು ಹಾಗೂ ಅವರ ಕುಟುಂಬದ ಸ್ಥಿತಿ ಏನು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಸರ್ವನಾಶ: ಬಿಎಸ್‌ವೈ ಅಧ್ಯಕ್ಷರಾಗಿದ್ದ ವೇಳೆ ಪಕ್ಷದಲ್ಲಿ ಎಲ್ಲ ಜಾತಿಯ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಬರಬೇಡಿ, ನೀವು ಬರಬೇಡಿ ಎಂದು ಹೇಳುತ್ತಿದ್ದಾರೆ. ಹೀಗಾದರೆ ನಮ್ಮನ್ನು ಪಕ್ಷಕ್ಕೆ ಸದಸ್ಯರಾಗಿ ಮಾಡಿಕೊಂಡಿದ್ದು ಯಾಕೆ? ಎಂದು ಅವರು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾಗೆ ಏನು ತಿಳಿಯುತ್ತೆ? ಯಡಿಯೂರಪ್ಪ ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ ಆಗುತ್ತದೆ. ನೆರೆ ಪರಿಹಾರ ಕೊಡಬೇಕೆಂದು ಬಿಎಸ್‌ವೈ ಮುನ್ನುಗ್ಗುತ್ತಿದ್ದಾರೆ. ಆದರೆ, ಈಗ ಅಂಥವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪಕ್ಷದ ವಿರುದ್ಧವೇ ಕಾರ್ಯಕರ್ತ ವಾಗ್ದಾಳಿ ನಡೆಸಿದ್ದಾನೆ.

ವಿಪಕ್ಷಗಳ ಮುಖಂಡರು ಬಿಎಸ್‌ವೈ ಅವರನ್ನು ಟೀಕಿಸುತ್ತಿಲ್ಲ. ಆದರೆ, ಪಕ್ಷದಲ್ಲಿ ಸೇರಿಕೊಂಡಿರುವ ಕೆಲ ಹುಳುಗಳು ಸಿಎಂ ಬಿಎಸ್‌ವೈ ಅವರನ್ನು ಮೂಲೆ ಗುಂಪು ಮಾಡಲು ಯೋಜನೆ ರೂಪಿಸಿವೆ. ಲಿಂಗಾಯತರ ಪ್ರಶ್ನಾತೀತ ನಾಯಕ ಬಿಎಸ್‌ವೈ ಮತ್ತವರ ಸಮುದಾಯವನ್ನು ಟಾರ್ಗೆಟ್ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಕ್ಕೆ ಕುಸಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮೂರ್ಖತನ: ನೆರೆ ವೀಕ್ಷಣೆಗೆ ಬಂದು ಅಮಿತ್ ಶಾ ರಾಜ್ಯದ ಪರಿಸ್ಥಿತಿಗೆ ಪರಿಹಾರ ಬಿಡುಗಡೆ ಮಾಡಲು ವಿಳಂಬ ಮಾಡಿದ್ದೇಕೆ? ಬೇರೆ ರಾಜ್ಯಗಳಿಗೆ ಒಂದು ರೀತಿ, ಕರ್ನಾಟಕ್ಕೆ ಒಂದು ರೀತಿ ಮಾಡುವುದು ಸಲ್ಲ. ಬಿಎಸ್‌ವೈ ಇಲ್ಲದೇ ರಾಜ್ಯದಲ್ಲಿ ಬಿಜೆಪಿ ಇರುತ್ತದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ಮೋದಿ ಮುಖ ನೋಡಿ ಜನತೆ ಮತ ನೀಡಿದ್ದಾರೆಂದರೆ ಅವರಿಗೆ ಹಳ್ಳಿಗಳ ಬಗ್ಗೆ ಏನು ಗೊತ್ತು ಎಂದು ನಂಜುಂಡಸ್ವಾಮಿ ವಿಡಿಯೋದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News