ಪರಮೇಶ್ವರ್ ಮನೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ: ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್

Update: 2019-10-13 12:23 GMT

ಬಾಗಲಕೋಟೆ, ಅ.13: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆ, ಕಾಲೇಜುಗಳ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.

ರವಿವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಮೇಲೆ ಟಾರ್ಗೇಟ್ ಮಾಡಿ ಐಟಿ ದಾಳಿಗಳು ಆಗುತ್ತಿವೆ. ಕಾಂಗ್ರೆಸ್ ಪಕ್ಷದ ಆತ್ಮಸ್ಥೈರ್ಯವನ್ನು ಕುಂದಿಸಿದರೆ ಕಾಂಗ್ರೆಸ್ ಅಶಕ್ತವಾಗುತ್ತೆ. ಇದರಿಂದ, ಲಾಭ ಪಡೆದ ಬಿಜೆಪಿ ಸಶಕ್ತವಾಗುತ್ತದೆ ಎಂಬ ನಿಟ್ಟಿನಲ್ಲಿ ಇಂತಹ ರಾಜಕೀಯ ಪ್ರೇರಿತ ದಾಳಿಗಳು ಆಗುತ್ತಿವೆ ಎಂದ ಅವರು, ಕಾಂಗ್ರೆಸ್‌ನವರು ಇಂತಹ ಐಟಿ ದಾಳಿಗಳಿಗೆ ಜಗ್ಗುವಂತವರಲ್ಲ ಎಂದು ಹೇಳಿದರು. ಮೋದಿ ಸರಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸರಕಾರ ನಡೆಸುತ್ತಿದೆ. ಇಂತಹ ಐಟಿ ದಾಳಿಗಳಿಂದ ಬಿಜೆಪಿ ಸಶಕ್ತವಾಗುತ್ತದೆ ಎನ್ನುವುದು ಹಗಲುಗನಸು ಎಂದು ಲೇವಡಿ ಮಾಡಿದರು.

ಐಟಿ ದಾಳಿ ರಾಜಕೀಯ ಪ್ರೇರಿತ ದಾಳಿ ಅಲ್ಲ ಎಂಬ ಹೇಳಿಕೆಯನ್ನು ಪರಮೇಶ್ವರ್ ನೀಡಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ನಮಗೆ ರಾಜಕೀಯ ಪ್ರೇರಿತ ಎಂದೆನಿಸಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ನಮ್ಮ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಭಿವ್ಯಕ್ತ ಸ್ವಾತಂತ್ರ ನಮಗಿದೆ. ಹೀಗಾಗಿ, ಪರಮೇಶ್ವರ್ ಹೀಗೆ ಹೇಳಿರಬಹುದು. ನಮ್ಮ ನಮ್ಮ ಅನಿಸಿಕೆಗಳನ್ನು ನಾವು ಹೇಳಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಮೇಲಿಂದ ಮೇಲೆ ದಾಳಿಗಳಾಗುತ್ತಿವೆ. ಬಿಜೆಪಿ ತನ್ನ ಅಧಿಕಾರದ ಚುಕ್ಕಾಣಿಯನ್ನು ಭದ್ರಗೊಳಿಸುವ ದೃಷ್ಟಿಯಿಂದ ಪದೇ ಪದೇ ಕೈ ನಾಯಕರ ಮೇಲೆ ಐಟಿ ದಾಳಿ ಮಾಡಿಸುತ್ತಿದೆ. ಬಿಜೆಪಿಗರು ದ್ವೇಷದ ರಾಜಕಾರಣ ಮಾಡುವುದನ್ನು ಮೊದಲು ಬಿಡಲಿ ಎಂದು ಪಾಟೀಲ್ ಹೇಳಿದರು.

ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧದ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾಂತ್ರಕ್ಕೆ ಅವಕಾಶವಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಸ್ವಾಂತ್ರಂತ್ರವನ್ನು ಮಾಧ್ಯಮಕ್ಕೆ ಕಲ್ಪಿಸಿಕೊಟ್ಟಿದ್ದಾರೆ. ಮಾಧ್ಯಮ ಸ್ವಾಂತ್ರವನ್ನು ಮೊಟಕುಗೊಳಿಸುವ ಕೆಲಸ ಮಾಡಬಾರದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News