ಸುಬ್ರಮಣ್ಯನ್ ಸ್ವಾಮಿ ವಿತ್ತ ಸಚಿವರಾಗಲಿ ಎಂದ ಲೇಖಕನಿಗೆ ನಿರ್ಮಲಾ ಸೀತಾರಾಮನ್ ಕೇಳಿದ್ದೇನು?

Update: 2019-10-13 12:24 GMT

ಹೊಸದಿಲ್ಲಿ, ಅ.13: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಟೀಕಿಸಿ, ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿಯವರನ್ನು ವಿತ್ತ ಸಚಿವರನ್ನಾಗಿ ನೇಮಿಸಬೇಕು ಎನ್ನುವ ಆಂದೋಲನವನ್ನು ಆರಂಭಿಸಬೇಕು ಎಂದು ಲೇಖಕ ದೇವದತ್ತ್ ಪಟ್ನಾಯಕ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಸ್ವತಃ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಿದ ನಂತರ ಪಟ್ನಾಯಕ್ ಕ್ಷಮೆ ಯಾಚಿಸಿದ್ದಾರೆ.

"ಕಲಾಮ್ ಜಿಯವರನ್ನು ಎರಡನೆ ಬಾರಿ ಆಯ್ಕೆ ಮಾಡಲು ಆರಂಭವಾದ ಆಂದೋಲನ ನೆನಪಿದೆಯೇ?. ಅರ್ಥಶಾಸ್ತ್ರ ಗೊತ್ತಿರುವ ಡಾ.ಸುಬ್ರಮಣ್ಯನ್ ಸ್ವಾಮಿಯವರನ್ನು ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡಲು ನಾವು ಆಂದೋಲನವೊಂದನ್ನು ಆರಂಭಿಸಬಹುದೇ?, ಅವರನ್ನೇಕೆ ನಿರ್ಲಕ್ಷಿಸಲಾಗುತ್ತಿದೆ?" ಎಂದು ಟ್ವೀಟ್ ಮಾಡಿದ್ದ ಪಟ್ನಾಯಕ್ ನಿರ್ಮಲಾ ಸೀತಾರಾಮನ್ ರ ಫೋಟೊಶಾಪ್ ಫೋಟೊಗಳನ್ನು ಪೋಸ್ಟ್ ಮಾಡಿದ್ದರು.

ಈ ಟ್ವೀಟ್ ಗೆ ಮೂರು ಪ್ರಶ್ನಾರ್ಥಕ ಚಿಹ್ನೆಗಳನ್ನು ಟ್ವೀಟ್ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದರು. ನಿರ್ಮಲಾ ಸೀತಾರಾಮನ್ ಈ ರೀತಿ ಪ್ರತಿಕ್ರಿಯಿಸಿದ ನಂತರ ಪಟ್ನಾಯಕ್ ಮತ್ತೊಂದು ಟ್ವೀಟ್ ಮಾಡಿ, "ನಾನು ಗೆರೆ ದಾಟಿದ್ದೇನೆ ಎಂದೆನಿಸುತ್ತಿದೆ. ಕ್ಷಮೆಯಾಚಿಸುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಇಷ್ಟು ನಡೆಯುವಾಗ ಪಟ್ನಾಯಕ್ ರ ಟ್ವೀಟನ್ನು ಹಲವರು ಗಮನಿಸಿದ್ದು, ಕ್ಷಮೆ ಯಾಚಿಸಿದ ನಂತರವೂ ಹಲವು ಟ್ವಿಟರಿಗರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News