ಅನರ್ಹ ಶಾಸಕರು ಮತ್ತೆ ಕಾಂಗ್ರೆಸ್ ಗೆ ಬಂದರೆ....!?: ಸಿದ್ದರಾಮಯ್ಯ ಹೇಳಿದ್ದು ಹೀಗೆ..

Update: 2019-10-13 16:14 GMT

ಚಿಕ್ಕಮಗಳೂರು, ಅ.13: ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಿಲುವುಗಳನ್ನು ಒಪ್ಪಿಕೊಂಡು ಬಂದಲ್ಲಿ ಪಕ್ಷಕ್ಕೆ ಸ್ವಾಗತಿಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಪಕ್ಷದ ಸಿದ್ಧಾಂತ, ನಿಲುವುಗಳನ್ನು ಒಪ್ಪಿಕೊಂಡು ಬಂದಲ್ಲಿ ಅನರ್ಹ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಲಾಗುವುದು. ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈ ಬಾರಿ ಅತಿವೃಷ್ಟಿಯೊಂದಿಗೂ ಬರಗಾಲವೂ ಇತ್ತು. 39 ತಾಲೂಕುಗಳಲ್ಲಿ ಬರಗಾಲವಿದ್ದರೆ, 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಇತ್ತು. ಕಂದಾಯ ಸಚಿವ ಆರ್.ಆಶೋಕ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಅತಿವೃಷ್ಟಿ, ಬರದ ಸಮಸ್ಯೆ ನೀಗಿಸಲು ಕೇಂದ್ರ ಸರಕಾರ 60 ದಿನಗಳ ಬಳಿಕ ಪರಿಹಾರ ಧನ ಬಿಡುಗಡೆ ಮಾಡಿದ್ದು, ಈ ಪರಿಹಾರಧನ ಎಲ್ಲಿಗೂ ಸಾಲುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಅತಿವೃಷ್ಟಿಯಾದಾಗ ಒಮ್ಮೆಯೂ ಭೇಟಿ ನೀಡಿ, ಜನರ ಬಗ್ಗೆ ಸಿಂಪತಿ ತೋರಲಿಲ್ಲ. ಅತಿವೃಷ್ಟಿ ವೇಳೆ ಅಮೇರಿಕ ಅಧ್ಯಕ್ಷ ಟ್ರಂಪ್ ಪರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ರಾಜ್ಯದಲ್ಲಿ ಪ್ರವಾಹದಿಂದ 2 ಕೋಟಿಯಷ್ಟು ಜನರು ಸಂತ್ರಸ್ತರಾಗಿದ್ದಾರೆ. 90 ಮಂದಿ ಸಾವನ್ನಪ್ಪಿದ್ದಾರೆ. 5 ಮಂದಿ ನಾಪತ್ತೆಯಾಗಿದ್ದು, ಒಂದು ಲಕ್ಷ ಕೋಟಿ ನಷ್ಟ ಸಂಭವಿಸಿದೆ. ಕೇಂದ್ರ ಸರಕಾರ ನೀಡಿರುವ ಪರಿಹಾರ ಧನ ಸಾಲುವುದಿಲ್ಲ ಎಂದ ಸಿದ್ದರಾಮಯ್ಯ, ಪ್ರಧಾನಿ ಮೋದಿ 56 ಇಂಚಿನ ಎದೆ ಇದ್ದರೆ ಸಾಲದು, ಬಡವರು, ಕಾರ್ಮಿಕರು, ನೊಂದವರಿಗೆ ನೆರವಾಗುವ ಮಾತೃ ಹೃದಯವೂ ಇರಬೇಕೆಂದು ಹೇಳಿದರು.

ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿ ಎಂದು ಅಧಿವೇಶನದಲ್ಲಿ ಆಗ್ರಹಿಸಿದ್ದೆ, ಆದರೆ ಸರಕಾರದವರು ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎಂದ ಅವರು, ರಾಜ್ಯದ ಜನರು 25 ಸಂಸದರನ್ನು ಆರಿಸಿ ಸಂಸತ್‍ಗೆ ಕಳಿಸಿದ್ದಾರೆ. ಆದರೆ ಅವರು ಅತಿವೃಷ್ಟಿ ಸಂದರ್ಭದಲ್ಲಿ ಕೇಂದ್ರದ ಬಳಿ ನೆರವು ಯಾಚಿಸುವುದನ್ನು ಬಿಟ್ಟು ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರಿನ ಸಂಸದೆ ಶೋಭಾ ಅವರೂ ಸದ್ಯ ನಾಪತ್ತೆಯಾಗಿದ್ದು, ಗೋ ಬ್ಯಾಕ್ ಶೋಭಾ ಎಂದವರೇ ಭಾರೀ ಮತದಿಂದ ಚುನಾಯಿಸಿದ್ದರು. ನಾಪತ್ತೆಯಾಗಿರುವ ಅವರು ಇನ್ನೆಂದೂ ಇತ್ತ ಬರಲಾರರು. ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಂಸದೆ ಶೋಭಾ, ಸಚಿವ ಸಿಟಿ ರವಿ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ರೈತರ ಮನೆಗೆ ಭೇಟಿ ನೀಡಿಲ್ಲ. ಈ ಸಂಬಂಧ ಸಿಟಿ ರವಿ ಅವರನ್ನು ಕೇಳಿದರೆ, ಸರಕಾರದ ಚೆಕ್‍ನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗುತ್ತೇನೆಂದು ಬಾಲಿಶವಾಗಿ ಮಾತನಾಡುತ್ತಾರೆಂದು ಸಿದ್ದರಾಮಯ್ಯ ಕಿಡಿಕಾರಿದರು.

ನನ್ನ ಅಧಿಕಾರವಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ 5 ಲಕ್ಷ ರೂ. ಪರಿಹಾರಧನ, ಅವರ ಕುಟುಂಬಕ್ಕೆ 2 ಸಾವಿರ ರೂ. ಮಾಶಾಸನ, ಮಕ್ಕಳಿಗೆ ಆರೋಗ್ಯ ಸೇವಾ ಯೋಜನೆಗಳನ್ನು ಜಾರಿ ಮಾಡಿದ್ದೆ. ಆದರೆ ಬಿಜೆಪಿ ಸರಕಾರ ಇದನ್ನು ಜಾರಿ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಅತಿವೃಷ್ಟಿಯಿಂದ ರಾಜ್ಯದಲ್ಲಿ ಬಾರೀ ನಷ್ಟ ಸಂಭವಿಸಿದೆ. 7,31,000 ಶಾಲಾ ಪುಸಕ್ತಗಳು ಹಾಳಾಗಿವೆ. 60 ದಿನಗಳ ಕಾಲ ಶಾಲೆಗಳು ಮುಚ್ಚಿವೆ. 12 ಸಾವಿರ ಶಾಲೆಗಳಿಗೆ ಹಾನಿಯಾಗಿದೆ. ಜನರ ಕಷ್ಟ ಅಧಿವೇಶನಗಳಲ್ಲಿ ಚರ್ಚಿಸದೇ ಇನ್ನೆಲ್ಲಿ ಹೇಳಬೇಕು. ಅತಿವೃಷ್ಟಿ ಬಗ್ಗೆ ಚರ್ಚೆ ನಡೆಸಲು ಉತ್ತರ ಕರ್ನಾಟಕದಲ್ಲಿ ಅಧಿವೇಶನ ಕರೆಯಿರಿ ಎಂದು ಸರಕಾರವನ್ನು ಕೇಳಿದ್ದೆ. ಆದರೆ ಬಿಜೆಪಿ ಗಿರಾಕಿಗಳು ಸರಕಾರದ ಬಂಡವಾಳ ಬಯಲಾಗುವ ಭೀತಿಯಿಂದ ಅಲ್ಲಿ ಅಧಿವೇಶನ ಕರೆಯಲೂ ಒಪ್ಪಲಿಲ್ಲ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ವಿಧಾನಸಭೆ ಸ್ಪೀಕರ್ ಆರೆಸ್ಸೆಸ್‍ನವರು, ಅವರು ಕೇಶವಕೃಪದ ಆದೇಶವನ್ನು ಮಾತ್ರ ಪಾಲಿಸುತ್ತಾರೆ. ಸರಕಾರ ಹೇಳಿದ್ದಕ್ಕೆ ತಲೆಯಾಡಿಸುತ್ತಿದ್ದಾರೆ. ವಿಧಾನಸಭೆಯ ಗೌರವ ಘನತೆಗಳನ್ನು ಸ್ಪೀಕರ್ ಎತ್ತಿಹಿಡಿಯುತ್ತಿಲ್ಲ. ಇದು ಮುಂದುವರಿದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೂ ಬಗ್ಗದಿದ್ದಲ್ಲಿ ಜನತಾ ನ್ಯಾಯಾಲಕ್ಕೆ ಹೋಗುತ್ತೇವೆ ಎಂದು ಇದೇ ವೇಳೆ ಸಿದ್ದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಪಿಎ ಆತ್ಮಹತ್ಯೆ ವಿಚಾರದಲ್ಲಿ ನಿಗೂಢತೆ ಇದೆ. ಆತ್ಮಹತ್ಯೆ ಪ್ರಕರಣದ ತನಿಖೆಯಾಗಬೇಕು. ಯಾವ ಏಜೆನ್ಸಿಯಿಂದ ತನಿಖೆಯಾಗಬೇಕೆಂಬುದನ್ನು ಸರಕಾರವೇ ನಿರ್ಧರಿಸಬೇಕಿದೆ. ಪಿಎ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂಬುದು ಸ್ಪಷ್ಟವಾಗಿದೆ.
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News