ಬಿಜೆಪಿ ಹಿಂದೂಗಳ ಪರವಾಗಿರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ: ಪ್ರಮೋದ್ ಮುತಾಲಿಕ್

Update: 2019-10-13 13:21 GMT

ಚಿಕ್ಕಮಗಳೂರು, ಅ.13: ಹಿಂದೂಗಳ ಹೆಸರಿನಲ್ಲಿಯೇ ಅಧಿಕಾರ ಹಿಡಿದಿರುವ ಬಿಜೆಪಿಯವರು ಇಂದು ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ ವಂಚಿಸುತ್ತಿದ್ದಾರೆ ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಶ್ರೀ ರಾಮಸೇನೆ ವತಿಯಿಂದ ಆಯೋಜಿಸಲಾಗಿದ್ದ ದತ್ತಮಾಲಾ ಅಭಿಯಾನದ ಅಂಗವಾಗಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದುಕೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಬಾರಿಯ ದತ್ತಮಾಲಾ ಅಭಿಯಾನ ಪೂರ್ಣಗೊಂಡಿಲ್ಲ. ಅದು ಅಪೂರ್ಣವಾಗಿದೆ. ಶ್ರೀ ದತ್ತಾತ್ರೇಯರ ಶಿಲಾವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕೊಂಡೋಯ್ಯಲು ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಅದನ್ನು ವಿರೋಧಿಸಿ ನಾವು ಶೋಭಾಯಾತ್ರೆಯನ್ನು ರದ್ದುಗೊಳಿಸಿ ಮೌನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಬಿಜೆಪಿಯವರು ಹಿಂದೂಗಳ ಹೆಸರಿನಲ್ಲಿ ಅಧಿಕಾರ ಹಿಡಿದರು. ಬಿ.ಎಸ್.ಯಡಿಯೂರಪ್ಪನವರೂ ಹಿಂದೂಗಳ ಹೆಸರಿನಲ್ಲಿಯೇ ಈಗ ಮುಖ್ಯಮಂತ್ರಿಯಾಗಿದ್ದಾರೆ. ದತ್ತಪೀಠದ ಹೆಸರಿನಲ್ಲಿ ಶಾಸಕರಾಗಿ, ಸಚಿವರಾಗಿರುವ ಸಿ.ಟಿ.ರವಿ ಸರಕಾರದ ಭಾಗವಾಗಿದ್ದಾರೆ. ಇಷ್ಟೆಲ್ಲಾ ಇದ್ದರೂ ದತ್ತಾತ್ರೇಯರ ಶಿಲಾಮೂರ್ತಿಯನ್ನು ಶೋಭಾಯಾತ್ರೆಯಲ್ಲಿ ಬಳಸಲು ಅನುಮತಿ ನಿರಾಕರಿಸಿರುವುದು ಖಂಡನೀಯ ಎಂದು ದೂರಿದರು.

ಬಿಜೆಪಿಯವರಿಂದ ಇಂತಹ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಅವರು ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ರಾಜ್ಯದ ಜನತೆ ಈ ಎಲ್ಲ ಘಟನೆಗಳನ್ನೂ ವೀಕ್ಷಿಸುತ್ತಿದ್ದಾರೆ. ಅವರು ಸುಮ್ಮನಿರುವುದಿಲ್ಲ. ಬಿಜೆಪಿಯವರಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅಯೋಧ್ಯೆಯಲ್ಲಿ ಗೇಟನ್ನು ತೆರೆಯಲಾಯಿತು. ಅದೇ ಸರ್ಕಾರವಿದ್ದಾಗಲೆ ಬಾಬರಿ ಮಸೀದಿಯನ್ನು ಕೆಡವಲಾಯಿತು. ಬಿಜೆಪಿ ಸರ್ಕಾರವಿದ್ದಾಗ ಅದು ಹಿಂದೂಗಳ ಪರವಾಗಿರುತ್ತದೆ ಎಂಬ ನಿರೀಕ್ಷೆ ಈಗ ಹುಸಿಯಾಗಿದೆ. ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲೇಬೇಕಾಗಿದೆ. ಇಂದಿನ ಘಟನೆಯನ್ನು ಖಂಡಿಸಿ ಗುರುವಾರ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆ ನಡೆಸಲಾಗುವುದು. ಆ ನಂತರ ಮುಂದಿನ ಹೋರಾಟದ ಕುರಿತು ತೀರ್ಮಾನಿಸಲಾಗುವುದು ಎಂದರು.

ಈಗ 130 ಕೆಜಿ ತೂಕದ ಶ್ರೀ ದತ್ತಾತ್ರೇಯರ ಶಿಲಾವಿಗ್ರಹವನ್ನು ಸಾಯಿಬಾಬಾ ದೇವಾಲಯದಲ್ಲಿ ಇಡಲಾಗಿದೆ. ಅದನ್ನು ಎಲ್ಲಿ ಇಡಬೇಕು. ಹೇಗೆ ಪೂಜಿಸಬೇಕು ಎಂಬ ಬಗ್ಗೆ ಸರ್ಕಾರವೇ ತೀರ್ಮಾನಿಸಬೇಕಿದೆ. ನಾವಂತೂ ಅದನ್ನು ವಾಪಸ್ ತೆಗೆದುಕೊಂಡು ಹೋಗುವುದಿಲ್ಲ ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News