ಮಡಿಕೇರಿ: ಹೋಂಸ್ಟೇಯಲ್ಲಿ ವೇಶ್ಯಾವಾಟಿಕೆ ದಂಧೆ: 6 ಮಂದಿಯ ಬಂಧನ

Update: 2019-10-14 12:17 GMT

ಮಡಿಕೇರಿ, ಅ.14: ಹೋಂಸ್ಟೇಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆರೋಪದಡಿ ಆರು ಮಂದಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂರ್ನಾಡು-ಕಾಂತೂರು ರಸ್ತೆಯಲ್ಲಿರುವ ಭವಾನಿ ಹೋಂ ಸ್ಟೇಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ನಡೆಸಿ ಹೋಂ ಸ್ಟೇ ಮಾಲಕಿ ಹಾಗೂ ಕೇರಳ ರಾಜ್ಯದ 5 ಮಂದಿಯನ್ನು ಬಂಧಿಸಿದ್ದಾರೆ. ದಾಳಿಯ ಸಂದರ್ಭ ಮನೆ ಮಾಲಕ ಭೀಮಯ್ಯ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ಕೇರಳ ರಾಜ್ಯದ ತಲಚ್ಚೇರಿ ನಿವಾಸಿಗಳಾದ ಶಾಜಿ, ದೇವದಾಸನ್, ಪೇರಾವೂರು ನಿವಾಸಿ ಮನು, ಕೂತುಪರಂಬು ನಿವಾಸಿ ನಿಷಾದ್ ಹಾಗೂ ಅಕ್ಷಯ್ ಮತ್ತು ಹೋಂಸ್ಟೆ ನಡೆಸುತ್ತಿದ್ದ ಅನುಸೂಯ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಪ್ರಕರಣಕ್ಕೆ ಬಳಸಿದ್ದ 2 ಕಾರು, 2 ದ್ವಿಚಕ್ರ ವಾಹನ ಮತ್ತು 22,030 ರೂ.ಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೋಂಸ್ಟೇಯಿಂದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.13ರಂದು ಮೂರ್ನಾಡುವಿನ ಕಾಂತೂರು ಮೂರ್ನಾಡು ರಸ್ತೆಯಲ್ಲಿರುವ ಭವಾನಿ ಹೋಂಸ್ಟೇಯಲ್ಲಿ ಮನೆ ಮಾಲಕ ಭೀಮಯ್ಯ ಹಾಗೂ ಅವರ ಪತ್ನಿ ಅನುಸೂಯ ಅವರು ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಶೋಷಣೆ ನಡೆಸುತ್ತಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು ಎಂದು ಹೇಳಲಾಗಿದೆ. 

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಅವರಿಗೆ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾಹಿತಿ ನೀಡಿದ್ದರು. ಪೊಲೀಸ್ ವರಿಷ್ಟಾಧಿಕಾರಿಗಳ ನಿರ್ದೇಶನದಲ್ಲಿ, ಮಡಿಕೇರಿ ಉಪ ವಿಭಾಗದ ಅಧೀಕ್ಷಕ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಒಂದು ತಂಡ ರಚಿಸಲಾಗಿತ್ತು. 

ಖಚಿತ ಮಾಹಿತಿ ಆಧರಿಸಿ ಹೋಂಸ್ಟೇ ಮೇಲೆ ದಾಳಿ ನಡೆಸಿದ ಸಂದರ್ಭ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದುದು ಕಂಡು ಬಂದಿದೆ. ಮನೆಯಲ್ಲಿದ್ದ ಕೇರಳ ರಾಜ್ಯದ 5 ಮಂದಿ ಮತ್ತು ಮನೆಯ ಮಾಲಕಿ ಅನುಸೂಯ ಅವರನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿದ್ದ ವಿರಾಜಪೇಟೆ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. 

ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿ.ಚೇತನ್, ಸಿಬ್ಬಂದಿಗಳಾದ ರವಿ ಕುಮಾರ್, ಕಿರಣ್, ಚರ್ಮಣ್ಣ, ಪ್ರೇಮ್ ಕುಮಾರ್, ದಿನೇಶ್, ಇಟ್ನಪ್ಪ ಹೊರಟ್ಟಿ, ವೀಣಾ, ಸುಕನ್ಯ, ಚಾಲಕರಾದ ಭಾನು ಪ್ರಕಾಶ್, ಪ್ರವೀಣ್ ಕುಮಾರ್ ಅವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News