ಪಿಎಂಸಿ ಬ್ಯಾಂಕ್ ಹಗರಣ: 90 ಲಕ್ಷ ರೂ. ಕೂಡಿಟ್ಟಿದ್ದ ಗ್ರಾಹಕ ಹೃದಯಾಘಾತದಿಂದ ಮೃತ್ಯು

Update: 2019-10-15 06:51 GMT

 ಮುಂಬೈ, ಅ.15: ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್(ಪಿಎಂಸಿ)ಬಿಕ್ಕಟ್ಟು ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಪಿಎಂಸಿ ಬ್ಯಾಂಕ್ ಹಗರಣದ ವಿರುದ್ಧ್ದ ಸೋಮವಾರ ಮಧ್ಯಾಹ್ನ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮನೆಗೆ ವಾಪಸಾದ ಬಳಿಕ ಬ್ಯಾಂಕ್(ಪಿಎಂಸಿ)ನ ಠೇವಣಿದಾರರಾದ ಸಂಜಯ್ ಗುಲಾಟಿ(51 ವರ್ಷ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

  ಸಂಜಯ್ ಗುಲಾಟಿ ಕುಟುಂಬ ಪಿಎಂಸಿ ಬ್ಯಾಂಕ್‌ನಲ್ಲಿ ನಾಲ್ಕು ಖಾತೆಗಳನ್ನು ಹೊಂದಿದ್ದು, ಒಶಿವಾರ ಶಾಖೆಯಲ್ಲಿ 90 ಲಕ್ಷ ರೂ.ಠೇವಣಿ ಇಟ್ಟಿತ್ತು. ಸಂಜಯ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

‘‘ವಿಶೇಷ ಚೇತನ ಪುತ್ರನ ಚಿಕಿತ್ಸೆಗೆ ಸಂಜಯ್‌ಗೆ ಪ್ರತಿದಿನ ಹಣದ ಅಗತ್ಯವಿತ್ತು. ತನ್ನದೇ ಖಾತೆಯಿಂದ ಹಣವನ್ನು ಪಡೆಯಲಾಗದೇ ಕಳೆದ ಕೆಲವು ಸಮಯದಿಂದ ಸಂಜಯ್ ಬೇಸರಗೊಂಡಿದ್ದರು’’ಎಂದು ಸಂಜಯ್ ಸಂಬಂಧಿ ರಾಜೇಶ್ ಹೇಳಿದ್ದಾರೆ.

 ‘‘ಸಂಜಯ್ ಹಾಗೂ ಅವರ ತಂದೆ ಸಿಎಲ್ ಗುಲಾಟಿ ಜೆಟ್ ಏರ್‌ವೇಸ್‌ನಲ್ಲಿ ಉದ್ಯೋಗಿಯಾಗಿದ್ದರು. ಸಂಜಯ್ ಮೊದಲಿಗೆ ತನ್ನ ಉದ್ಯೊಗ ಕಳೆದುಕೊಂಡಿದ್ದರು. ಇದೀಗ ಹಗರಣದಲ್ಲಿ ಮುಳುಗಿರುವ ಪಿಎಂಸಿ ಬ್ಯಾಂಕ್‌ನಲ್ಲಿ ಠೇವಣಿದಾರರಿಗೆ ಹಣ ಹಿಂಪಡೆಯಲು ಆರ್‌ಬಿಐ ನಿರ್ಬಂಧ ಹೇರಿರುವ ಕಾರಣ ಮತ್ತಷ್ಟು ಒತ್ತಡದಲ್ಲಿದ್ದರು. ಅವರಿಗೆ ಗಂಭೀರ ಕಾಯಿಲೆ ಇರಲಿಲ್ಲ. ಥಾರಾಯ್ಡಾ ಸಮಸ್ಯೆಯಿತ್ತು. ಸೋಮವಾರ ಅವರು ಬ್ಯಾಂಕ್ ಠೇವಣಿದಾರರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರು ಪ್ರತಿಭಟನಾಕಾರರು ಕಣ್ಣೀರಿಡುವುದನ್ನು ನೋಡಿದ್ದರು. ಮಧ್ಯಾಹ್ನ 3:30ಕ್ಕೆ ಮನೆಗೆ ವಾಪಸಾಗಿದ್ದ ಅವರು ಊಟ ಮಾಡಿದ ಬಳಿಕ ನಿದ್ದೆಗೆ ಜಾರಿದ್ದರು. ಸಂಜೆ 4:45ರ ಸುಮಾರಿಗೆ ಅವರ ಪತ್ನಿ ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿದೆ.ಈ ಸುದ್ದಿ ಕೇಳಿ ನಮಗೆಲ್ಲರಿಗೂ ಆಘಾತವಾಗಿದೆ’ ಎಂದು ಸೊಸೈಟಿ ಕಾರ್ಯರ್ಶಿ ಯತೀಂದ್ರ ಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News