ಖಾಸಗಿ ಬಸ್ ಪಲ್ಟಿ: 10 ಪ್ರಯಾಣಿಕರಿಗೆ ಗಾಯ, ತಪ್ಪಿದ ಭಾರೀ ದುರಂತ

Update: 2019-10-15 18:31 GMT

ಶಿವಮೊಗ್ಗ, ಅ.15: ವಾಹನ ಹಿಂದಿಕ್ಕುವ ಭರದಲ್ಲಿ ಖಾಸಗಿ ಬಸ್‍ವೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದ ಘಟನೆ, ನಗರದ ಹೊರವಲಯ ಮಲ್ಲಿಗೇನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಮಂಗಳವಾರ ಸಂಜೆ ನಡೆದಿದೆ. 

ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ ಸುಮಾರು 10 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಹಾಗೂ ಗಾಡಿಕೊಪ್ಪದ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. 

ಹೊಸನಗರದಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಗುರುಶಕ್ತಿ ಬಸ್ ಅವಘಡಕ್ಕೆ ತುತ್ತಾದ ಬಸ್ ಎಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಮಲ್ಲಿಗೇನಹಳ್ಳಿ ಬಳಿ ಲಾರಿಯೊಂದನ್ನು ಓವರ್‍ಟೇಕ್ ಮಾಡಲು ಚಾಲಕ ಯತ್ನಿಸಿದ್ದಾನೆ. ಆದರೆ ಚಾಲನೆಯ ನಿಯಂತ್ರಣ ಕಳೆದುಕೊಂಡು ನೇರವಾಗಿ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರಕ್ಕೆ ಬಸ್ ಢಿಕ್ಕಿ ಹೊಡೆದಿದೆ.

ಬಸ್ ಪಲ್ಟಿಯಾಗುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದ ಇತರೆ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಬಸ್‍ನಲ್ಲಿ ಸಿಲುಕಿಬಿದ್ದ ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ. ವಾಹನಗಳ ಮೂಲಕ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. 

ತಪ್ಪಿದ ಅವಘಡ: ಬಸ್ ಅವಘಡಕ್ಕೆ ತುತ್ತಾದ ವೇಳೆ ಭಾರೀ ಪ್ರಮಾಣದ ಗಾಳಿ-ಮಳೆಯಾಗುತ್ತಿತ್ತು. ಇದರಿಂದ ಈ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಈ ಕಾರಣದಿಂದ ತ್ರೀಫೇಸ್ ಲೈನ್ ಹಾದು ಹೋಗಿದ್ದ ಕಂಬಕ್ಕೆ ಬಸ್ ಢಿಕ್ಕಿಯಾದರು ಯಾವುದೇ ಅಪಾಯವಾಗಿಲ್ಲ.

ಒಂದ ವೇಳೆ ವಿದ್ಯುತ್ ಪೂರೈಕೆಯಿದ್ದಿದ್ದರೆ, ವಿದ್ಯುತ್ ಪ್ರವಹಿಸಿ ದೊಡ್ಡ ದುರಂತ ಹಾಗೂ ಸಾವುನೋವಿನ ಘಟನೆಗಳು ಸಂಭವಿಸುವ ಸಾಧ್ಯತೆಗಳಿದ್ದವು. ಮಳೆ-ಗಾಳಿಯೇ ಅವಘಡಕ್ಕೆ ತುತ್ತಾದ ಬಸ್ ಪ್ರಯಾಣಿಕರ ಪಾಲಿಗೆ ಜೀವದಾನ ಕಲ್ಪಿಸಿದೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂದಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News