ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಬಿಇಓ

Update: 2019-10-15 18:32 GMT

ಶಿವಮೊಗ್ಗ, ಅ. 15: ಅನುದಾನಿತ ವಿದ್ಯಾಸಂಸ್ಥೆಯೊಂದರ ಸಿಬ್ಬಂದಿಗಳ ವೇತನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ ಜಿಲ್ಲೆಯ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ. 

ಎಂ.ಸಿ.ಆನಂದ್ ಎಸಿಬಿ ಬಲೆಗೆ ಬಿದ್ದ ಬಿಇಓ ಎಂದು ಗುರುತಿಸಲಾಗಿದೆ. ಭದ್ರಾವತಿ ಪಟ್ಟಣದ ಬಿಇಓ ಕಚೇರಿಯಲ್ಲಿಯೇ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದ್ದು, ರಾತ್ರಿ ನ್ಯಾಯಾಧೀಶರ ಮುಂಭಾಗ ಬಿಇಓ ರನ್ನು ಹಾಜರುಪಡಿಸಲಾಗುವುದು ಎಂದು ಎಸಿಬಿ ಮೂಲಗಳು ಮಾಹಿತಿ ನೀಡಿವೆ. 

ಎಸಿಬಿ ಡಿವೈಎಸ್‍ಪಿ ವೇಣುಗೋಪಾಲ್, ಇನ್ಸ್‍ಪೆಕ್ಟರ್ ವೀರೇಂದ್ರ, ಸಿಬ್ಬಂದಿಗಳಾದ ವಸಂತ್, ನಾಗರಾಜ್, ರಘುನಾಯ್ಕ್, ಹರೀಶ್, ಶ್ರೀನಿವಾಸ್, ಯೋಗೇಶಪ್ಪರವರು ಈ ಕಾರ್ಯಾಚರಣೆ ನಡೆಸಿದ್ದಾರೆ. 

ಘಟನೆ ಹಿನ್ನೆಲೆ: ಭದ್ರಾವತಿಯ ಡಾ. ಬಿ. ಆರ್. ಅಂಬೇಡ್ಕರ್ ವಿದ್ಯಾಸಂಸ್ಥೆಯಡಿ ನಡೆಯುತ್ತಿರುವ ಮಲೆನಾಡು ಕನ್ನಡ ಪ್ರೌಢಶಾಲೆಯ ಸಿಬ್ಬಂದಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಬಿಡುಗಡೆಯಾಗಿರಲಿಲ್ಲ. ವೇತನ ಬಿಡುಗಡೆ ಮಾಡುವಂತೆ ಸಂಸ್ಥೆಯ ಅಧ್ಯಕ್ಷರು ಬಿಇಓರವರಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿರಲಿಲ್ಲ. 

ವೇತನ ಬಿಡುಗಡೆಗೆ 5000 ರೂ. ನೀಡುವಂತೆ ಬಿಇಓ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ವಿದ್ಯಾಸಂಸ್ಥೆಯ ಅಧ್ಯಕ್ಷರು ಎಸಿಬಿ ದಳಕ್ಕೆ ಮಾಹಿತಿ ನೀಡಿದ್ದರು. ಮಂಗಳವಾರ ಸಂಜೆ ವಿದ್ಯಾಸಂಸ್ಥೆಯ ಅಧ್ಯಕ್ಷರಿಂದ ಕಚೇರಿಯಲ್ಲಿ ಹಣ ಪಡೆಯುವಾಗ, ಎಸಿಬಿ ಪೊಲೀಸರು ಹಣದ ಸಮೇತ ಬಿಇಓರನ್ನು ಬಂಧಿಸಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News