ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದ ನಿರ್ಲಕ್ಷ್ಯ ಅಕ್ಷಮ್ಯ: ಎಸ್‌ಡಿಪಿಐ

Update: 2019-10-15 18:52 GMT

ಬೆಂಗಳೂರು, ಅ.15: ರಾಜ್ಯ ಸರಕಾರ ತನ್ನ ಬಜೆಟ್‌ನಿಂದ ಶೇ.11.3ರಷ್ಟು ಅಂದರೆ 25,087 ಕೋಟಿ ರೂ.ಮೊತ್ತವನ್ನು ಶಿಕ್ಷಣಕ್ಕಾಗಿ ಮೀಸಲಿರಿಸಿದ್ದರೂ ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟಕ್ಕಾಗಿ ನೀಡುವ ಪ್ರಾಶಸ್ತ್ಯ ಅತ್ಯಂತ ಕೆಳಮಟ್ಟದ್ದಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಆರೋಪಿಸಿದ್ದಾರೆ.

ಮುಂದಿನ ತಲೆಮಾರಿನ ಉಜ್ವಲ ಭವಿಷ್ಯ ಹಾಗೂ ರಾಜ್ಯದಲ್ಲಿ ಸಾಮಾಜಿಕ-ವೈಜ್ಞಾನಿಕ-ಆರ್ಥಿಕ ಪ್ರಗತಿಗಾಗಿ ಇಂದಿನ ವಿದ್ಯಾರ್ಥಿಗಳಿಗೆ ಶ್ರೇಷ್ಠ ಮಟ್ಟದ ವಿದ್ಯೆಯನ್ನು ನೀಡುವ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಕಾಳಜಿ ಇಲ್ಲದ ಸರಕಾರದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಸಂಭವಿಸುತ್ತಿದೆ ಎಂದು ಅವರು ದೂರಿದ್ದಾರೆ.

ಇತ್ತೀಚಿನ ಭಾರತೀಯ ಮಹಾಲೇಖಪಾಲರ ವರದಿಯಲ್ಲಿ ತಿಳಿಸಿರುವ ರಾಜ್ಯದ ಅಂಕಿ ಅಂಶಗಳು ಕಳವಳಕಾರಿಯಾಗಿದೆ. ಮೀಸಲಿರಿಸಿದ ಬಜೆಟ್‌ನಿಂದ ಕೇವಲ ಶೇ.30 ರಿಂದ 55ರಷ್ಟು ಮಾತ್ರ ಬಳಕೆ ಮಾಡಿದ್ದು, ಸರಕಾರದ ಇಂತಹ ಸೋಗಲಾಡಿತನ ಮತ್ತು ನಿರ್ಲಕ್ಷ್ಯ ಅಕ್ಷಮ್ಯ ಎಂದು ಅಬ್ದುಲ್ ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ 642 ಪ್ರೌಢ ಶಾಲೆಗಳಲ್ಲಿ ಗಣಿತ ಶಿಕ್ಷಕರಿಲ್ಲದಿರುವುದು ಪೂರಕ ಪಠ್ಯ ವಸ್ತುಗಳಾದ ಕಂಪ್ಯೂಟರ್-ಪ್ರಯೋಗ ಶಾಲಾ ಉಪಕರಣಗಳು- ಪಿಠೋಪಕರಣ ಗಳನ್ನು ಖರೀದಿಸಿ ಒದಗಿಸದಿರುವುದು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವುದು ಇತ್ಯಾದಿಗಳೆಲ್ಲಾ ಅತ್ಯಂತ ಗಂಭೀರ ಲೋಪಗಳಾಗಿದ್ದು. ಇಂತಹ ಅಪಾಯಕಾರಿ ನಿರ್ಲಕ್ಷಕ್ಕೆ ಕಾರಣರಾದವರನ್ನು ಹುದ್ದೆಗಳಿಂದ ಕೆಳಗಿಳಿಸಿ ಜೈಲಿಗೆ ಅಟ್ಟಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನಿರಬೇಕೆಂಬ ನಿಯಮವಿದ್ದರೂ 874 ಶಾಲೆಗಳಲ್ಲಿ ಈ ನಿಯಮವನ್ನು ಗಾಳಿಯಲ್ಲಿ ತೂರಲಾಗಿದೆ. ಅದೇ ರೀತಿ 40 ವಿದ್ಯಾರ್ಥಿಗಳಿಗೆ ತರಗತಿ ಕೊಠಡಿ ಇರಬೇಕೆಂಬ ನಿಯಮವಿದ್ದರೂ 2,721 ಶಾಲೆಗಳಲ್ಲಿ ಇದನ್ನು ನಿರ್ಲಕ್ಷಿಸಿ ವಿದ್ಯಾರ್ಥಿಗಳನ್ನು ಲೆಕ್ಕಕ್ಕಿಂತ ಹೆಚ್ಚಾಗಿ ತುಂಬಿಸಲಾಗಿದೆ ಎಂದು ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರ ಭರ್ತಿ ನೇಮಕಾತಿ ಮಾಡುವುದರಿಂದ ಎರಡು ಪ್ರಯೋಜನಗಳಿವೆ. ಒಂದು ಗುಣಮಟ್ಟದ ಶಿಕ್ಷಣ ನೀಡುವುದು ಮತ್ತೊಂದು ಅರ್ಹರಿಗೆ ಶಿಕ್ಷಕ ಉದ್ಯೋಗ ದೊರೆಯುವುದು. ಅದೇ ರೀತಿ ಸಾಕಷ್ಟು ಕೊಠಡಿಗಳು ಪ್ರತ್ಯೇಕ ಶೌಚಾಲಯ, ಕಂಪ್ಯೂಟರ್ ಮತ್ತು ಲ್ಯಾಬ್ ಉಪಕರಣಗಳ ಪೂರೈಕೆ ಇತ್ಯಾದಿಗಳೆಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆಸಕ್ತಿ ಹೆಚ್ಚುವಂತೆ ಮಾಡುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರತಿಭೆ ಹಾಗೂ ಪಾಂಡಿತ್ಯ ವೃದ್ಧಿಸುವಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇಂದಿನ ತೀವ್ರಗತಿಯ ವೈಜ್ಞಾನಿಕ ಯುಗದಲ್ಲಿ ಸಂಶೋಧನೆ, ಕೃತಕ ಬುದ್ಧಿಮತ್ತೆ, ಖಗೋಳಾನ್ವೇಷಣೆ, ಅತ್ಯಾಧುನಿಕ ವೈಜ್ಞಾನಿಕ ವಿಶ್ವವಿದ್ಯಾಲಯ ಮುಂತಾದ ಮೇರು ವಿಷಯಗಳಲ್ಲಿ ಜಗತ್ತಿನ ವಿವಿಧ ದೇಶಗಳು ಖರ್ಚು ಮಾಡುತ್ತಿವೆ ಹಾಗೂ ಚಿಂತಿಸುತ್ತಿವೆ. ಆದರೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಟ್ಟದಲ್ಲೇ ಇಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವೈಫಲ್ಯ ಕಾಣುತ್ತಿದೆ ಮತ್ತು ನಿರ್ಲಕ್ಷ ತೋರಲಾಗುತ್ತಿದೆಯೆಂದರೆ ನಮ್ಮ ಸರಕಾರಗಳು ಕೇವಲ ಕ್ಷುದ್ರ ರಾಜಕೀಯ ಮಾಡಲು ಮಾತ್ರ ಅರ್ಹ ಎಂದು ತಿಳಿಯುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಈ ಎಲ್ಲ ನಿರ್ಲಕ್ಷಗಳನ್ನು ತಕ್ಷಣವೇ ತ್ಯಜಿಸಿ ಎಲ್ಲ ಕೊರತೆಗಳನ್ನು ನೀಗಿಸಬೇಕು. ಶೈಕ್ಷಣಿಕವಾಗಿ ಮೇರು ಸಾಧನೆಯನ್ನು ಮಾಡಲು ಎಲ್ಲ ರೀತಿಯ ಸೌಲಭ್ಯ, ಪ್ರೋತ್ಸಾಹ ನೀಡಬೇಕೆಂದು ಅಬ್ದುಲ್ ಹನ್ನಾನ್ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News