ಜಾಗತಿಕ ಹಸಿವು ಸೂಚ್ಯಂಕ: ಪಾತಾಳಕ್ಕೆ ಕುಸಿದ ಭಾರತ

Update: 2019-10-16 17:38 GMT

ಹೊಸದಿಲ್ಲಿ, ಅ.16: ಒಟ್ಟು 117 ರಾಷ್ಟ್ರಗಳಿರುವ ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತ 102ನೇ ಸ್ಥಾನಕ್ಕೆ ಕುಸಿದಿದ್ದು, ನೆರೆಯ ದೇಶಗಳಾದ ನೇಪಾಳ, ಪಾಕ್ ಮತ್ತು ಬಾಂಗ್ಲಾಕ್ಕಿಂತಲೂ ಕೆಳಗಿನ ಸ್ಥಾನ ಪಡೆದಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷ ಭಾರತ 95ನೇ ಸ್ಥಾನದಲ್ಲಿತ್ತು.

ನೆರೆಯ ರಾಷ್ಟ್ರಗಳಾದ ನೇಪಾಳ 73ನೇ, ಶ್ರೀಲಂಕಾ 66ನೇ, ಬಾಂಗ್ಲಾದೇಶ 88ನೇ, ಮ್ಯಾನ್ಮಾರ್ 69ನೇ, ಚೀನಾ 25ನೇ ಹಾಗೂ ಪಾಕಿಸ್ತಾನ 94ನೇ ಸ್ಥಾನ ಗಳಿಸಿವೆ. ಈ ರಾಷ್ಟ್ರಗಳೂ ಭಾರತದೊಂದಿಗೆ ಗಂಭೀರ ಹಸಿವಿನ ಪ್ರಮಾಣ ವಿಭಾಗದಲ್ಲಿ ಸ್ಥಾನಪಡೆದಿದ್ದರೂ ಜನತೆಗೆ ಆಹಾರ ಒದಗಿಸುವಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ತೋರಿವೆ ಎಂದು ವರದಿ ತಿಳಿಸಿದೆ. ಚೀನಾವು ಕಡಿಮೆ ಹಸಿವಿನ ಪ್ರಮಾಣ ವಿಭಾಗದಲ್ಲಿ, ಶ್ರೀಲಂಕಾ ಸಾಮಾನ್ಯ ಹಸಿವಿನ ವಿಭಾಗದಲ್ಲಿ ಸ್ಥಾನ ಪಡೆದಿವೆ.

ಬೆಲಾರೂಸ್, ಉಕ್ರೇನ್, ಟರ್ಕಿ, ಕ್ಯೂಬ ಮತ್ತು ಕುವೈಟ್ ಸಹಿತ 17 ದೇಶಗಳು 5ಕ್ಕಿಂತ ಕಡಿಮೆ ಜಿಎಚ್‌ಐ ಅಂಕ ದಾಖಲಿಸಿ ಅಗ್ರಸ್ಥಾನವನ್ನು ಹಂಚಿಕೊಂಡಿವೆ ಎಂದು ‘ಗ್ಲೋಬಲ್ ಹಂಗರ್ ಇಂಡೆಕ್ಸ್’(ಜಿಎಚ್‌ಐ) ವೆಬ್‌ಸೈಟ್ ತಿಳಿಸಿದೆ. ಐರ್‌ಲ್ಯಾಂಡ್‌ನ ಜಾಹೀರಾತು ಸಂಸ್ಥೆ ‘ಕನ್ಸರ್ನ್ ವರ್ಲ್ಡ್‌ವೈಡ್ ’ ಮತ್ತು ಜರ್ಮನ್‌ನ ‘ವೆಲ್ಟ್ ಹಂಗರ್ ಹಿಲ್ಫ್’ ಸಂಸ್ಥೆ ಜಂಟಿಯಾಗಿ ಈ ವರದಿ ತಯಾರಿಸಿದೆ.

ಅಪೌಷ್ಟಿಕತೆ; ಮಗು ಸೊರಗಿರುವುದು(ಕೃಶವಾಗಿರುವುದು) -ಎತ್ತರಕ್ಕೆ ಸರಿಯಾದ ದೇಹ ತೂಕ ಹೊಂದಿರದ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ ; ದೈಹಿಕ ಬೆಳವಣಿಗೆ ಕುಂಠಿತವಾಗಿರುವುದು(ವಯಸ್ಸಿಗೆ ತಕ್ಕಷ್ಟು ಎತ್ತರ ಹೊಂದಿರದ ಐದು ವರ್ಷದೊಳಗಿನ ಮಕ್ಕಳ ಪ್ರಮಾಣ); ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ- ಈ ನಾಲ್ಕು ಸೂಚ್ಯಂಕವನ್ನು ಆಧರಿಸಿ ಜಿಎಚ್‌ಐ ಅಂಕ ಲೆಕ್ಕ ಹಾಕಲಾಗುತ್ತದೆ.

ಭಾರತದಲ್ಲಿ ಮಗು ಕೃಶವಾಗಿರುವ ಪ್ರಮಾಣ 2008-12ರ ಅವಧಿಯಲ್ಲಿ 16.5% ಇದ್ದರೆ, 2014-18ರ ಅವಧಿಯಲ್ಲಿ 20.8%ಕ್ಕೇರಿದ್ದು ಸೂಚ್ಯಂಕದಲ್ಲಿರುವ ರಾಷ್ಟ್ರಗಳಲ್ಲೇ ಅತೀ ಹೆಚ್ಚಿನ ಪ್ರಮಾಣ ಇದಾಗಿದೆ. 6 ತಿಂಗಳಿಂದ 23 ತಿಂಗಳ ಪ್ರಾಯದ ಮಕ್ಕಳಲ್ಲಿ ಕೇವಲ 9.6% ಮಕ್ಕಳಿಗೆ ಮಾತ್ರ ಕನಿಷ್ಟ ಸ್ವೀಕಾರಾರ್ಹ ಆಹಾರ ದೊರಕುತ್ತದೆ. ತೀವ್ರ ಆಂತರಿಕ ಬಿಕ್ಕಟ್ಟು ಹಾಗೂ ಗಂಭೀರ ಹವಾಮಾನ ಸಮಸ್ಯೆ ಎದುರಿಸುತ್ತಿರುವ ಯೆಮನ್ ಹಾಗೂ ದಿಬೌಟಿ ದೇಶಗಳೂ ಈ ವಿಭಾಗದಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ದಾಖಲಿಸಿದೆ.

ಆದರೆ 5ರ ಕೆಳಹರೆಯದ ಮಕ್ಕಳ ಮರಣ ಸೂಚ್ಯಂಕ ವಿಭಾಗದಲ್ಲಿ ಭಾರತ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. ಜೊತೆಗೆ, ‘ಸಮರ್ಪಕ ಆಹಾರದ ಕೊರತೆಯಿಂದ ಅಪೌಷ್ಟಿಕತೆ’ ಸೂಚ್ಯಂಕ ವಿಭಾಗದಲ್ಲೂ ಭಾರತ ತನ್ನ ದಾಖಲೆಯನ್ನು ಸುಧಾರಿಸಿಕೊಂಡಿದೆ.

ಭಾರತದಲ್ಲಿ ಹಸಿವಿನ ಪ್ರಮಾಣ ಗಂಭೀರ

ಭಾರತದಲ್ಲಿ ಹಸಿವಿನ ಪ್ರಮಾಣ ಗಂಭೀರ ಮಟ್ಟದಲ್ಲಿದೆ. 2000ರಲ್ಲಿ ಭಾರತ 113 ದೇಶಗಳಲ್ಲಿ 83ನೇ ಸ್ಥಾನ ಪಡೆದಿತ್ತು. ಭಾರತದ ಜಿಎಚ್‌ಐ ಅಂಕ ಕೂಡಾ ಇಳಿಕೆಯಾಗುತ್ತಾ ಹೋಗಿದೆ. 2005ರಲ್ಲಿ 38.9 ಅಂಕವಿದ್ದರೆ, 2010ರಲ್ಲಿ 32, 2010-2019ರ ಅವಧಿಯಲ್ಲಿ 30.3ಕ್ಕೆ ಇಳಿದಿದೆ.

ಬಯಲು ಶೌಚ ಕ್ರಮ ತೊಲಗಿಲ್ಲ

ವರದಿಯಲ್ಲಿ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನವನ್ನು ಉಲ್ಲೇಖಿಸಿದ್ದು , ಭಾರತದಲ್ಲಿ ಬಯಲು ಶೌಚ ಕ್ರಮ ಇನ್ನೂ ಚಾಲ್ತಿಯಲ್ಲಿದೆ ಎಂದು ತಿಳಿಸಿದೆ.

 ಹೊಸ ಶೌಚಾಲಯ ಕಟ್ಟಲಾಗಿದ್ದರೂ ಬಯಲು ಶೌಚ ಕ್ರಮವನ್ನು ಇನ್ನೂ ಕೆಲವೆಡೆ ಅನುಸರಿಸಲಾಗುತ್ತದೆ. ಇದು ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಮಕ್ಕಳಲ್ಲಿ ಪೌಷ್ಟಿಕಾಹಾರವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಕುಂದುವ ಕಾರಣ , ಅವರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಗಂಡಾಂತರಕ್ಕೆ ಸಿಲುಕಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News