"ಬೇಟಿ ಬಚಾವೋ ಎಲ್ಲಿದೆ...'' ಪ್ರಧಾನಿ ಮೋದಿಯ ಹರ್ಯಾಣ ರ‍್ಯಾಲಿಯಲ್ಲಿ ಬೊಬ್ಬಿಟ್ಟ ವ್ಯಕ್ತಿ

Update: 2019-10-16 06:35 GMT

ಥಾನೇಸರ್: ಹರ್ಯಾಣದ ಥಾನೇಸರ್ ಎಂಬಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿರುವ ವೇಳೆ ವ್ಯಕ್ತಿಯೊಬ್ಬ ಕೇಂದ್ರ ಸರಕಾರದ 'ಬೇಟಿ ಬಚಾವೋ,ಬೇಟಿ ಪಢಾವೋ' ಅಭಿಯಾನವನ್ನು ಪ್ರಶ್ನಿಸಿ ವೇದಿಕೆಯತ್ತ ಕಾಗದಗಳನ್ನೆಸೆದ ಘಟನೆ ನಡೆದಿದೆ.

''ಬೇಟಿ ಬಚಾವೋ, ಬೇಟಿ ಪಢಾವೋ ಎಲ್ಲಿದೆ'' ಎಂದು ಆ ವ್ಯಕ್ತಿ ಬೊಬ್ಬೆ ಹೊಡೆಯಲಾರಂಭಿಸಿದಾಗ ರ‍್ಯಾಲಿ ಸ್ಥಳದಲ್ಲಿ ಸುಮಾರು ಐದು ನಿಮಿಷಗಳ ಕಾಲ ಗಲಿಬಿಲಿಯುಂಟಾಯಿತು. ಕೊನೆಗೆ ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯನ್ನು ಅಲ್ಲಿಂದ ಹೊರಗೊಯ್ದರು. ಈ ಘಟನೆ ನಡೆದಾಗ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಹಲವರು ಏನಾಯಿತೆಂಬ ಕುತೂಹಲದಿಂದ ತಮ್ಮ ಕುರ್ಚಿಗಳ ಮೇಲೆ ನಿಂತುಕೊಂಡು ನೋಡುತ್ತಿದ್ದುದು ಕಂಡು ಬಂದಿತು.

ಆದರೆ ಪ್ರಧಾನಿ ಮಾತ್ರ ತಮ್ಮ ಭಾಷಣ ನೀಡುವುದನ್ನು ಮುಂದುವರಿಸಿದ್ದರು. ಆ ವ್ಯಕ್ತಿ ವೇದಿಕೆಯತ್ತ ಎಸೆದಿದ್ದ ಕಾಗದದ ಆಧಾರದಲ್ಲಿ ಆತನನ್ನು ಜಗಧ್ರಿಯ ಗುಲಾಬ್ ನಗರದ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.

ವೇದಿಕೆಯತ್ತ ಎಸೆದ ಕಾಗದ ಆ ವ್ಯಕ್ತಿ ಪ್ರಧಾನಿಗೆ ಬರೆದ ಪತ್ರವಾಗಿದ್ದು ಅದರಲ್ಲಿ ಆತ ಆ. 26ರಂದು ಯಮುನಾ ನಗರದ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅದೇ ಶಾಲೆಯ ಶಿಕ್ಷಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾನೆ. ಶಾಲಾ ಪ್ರಾಂಶುಪಾಲ ಈ ವಿಚಾರವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು ಆದರೆ ಸಂತ್ರಸ್ತೆಯ ಹೆತ್ತವರು ಪಟ್ಟು ಬಿಡದೇ ಇದ್ದಾಗ ಆಕೆಯನ್ನು ಥಳಿಸಿ ಆಕೆಯ ಜಾಂತಿ ನಿಂದನೆಗೈಯ್ಯಲಾಗಿತ್ತು ಎಂದು ಮೋದಿಗೆ ಪತ್ರದಲ್ಲಿ ಆತ ಬರೆದಿದ್ದಾನೆ.

ಘಟನೆ ಕುರಿತಂತೆ ಪೊಲೀಸರ ಗಮನ ಸೆಳೆಯಲಾಯಿತಾದರೂ ಅವರು ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತೆಯ ಹೆತ್ತವರ ವಿರುದ್ಧವೇ  ಎಫ್‍ಐಆರ್ ದಾಖಲಿಸಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಆದರೆ ಇನ್ನೂ ಎಫ್‍ಐಆರ್ ವಾಪಸ್ ಪಡೆಯಲಾಗಿಲ್ಲ ಎಂದು ಆತ  ದೂರಿದ್ದಾನೆ.

ಈ ಕುರಿತಂತೆ ಎಸ್‍ಪಿ ಆಸ್ಥಾ ಬಳಿ ವಿಚಾರಿಸಿದಾಗ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News