ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕೆಟ್ಟ ಹಂತಕ್ಕೆ ತಲುಪಲು ಮನಮೋಹನ್ ಸಿಂಗ್-ರಘುರಾಮ್ ರಾಜನ್ ಹೊಣೆ: ನಿರ್ಮಲಾ ಸೀತಾರಾಮನ್

Update: 2019-10-16 17:31 GMT

ಹೊಸದಿಲ್ಲಿ, ಅ.16: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಆರ್‌ಬಿಐ ಮಾಜಿ ಗವರ್ನರ್ ರಘುರಾಮನ್ ರಾಜನ್ ಅವಧಿಯಲ್ಲಿ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸ್ಥಿತಿ ಅತ್ಯಂತ ಶೋಚನೀಯ ಹಂತಕ್ಕೆ ತಲುಪಿತ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನ್ಯೂಯಾರ್ಕ್‌ನ ಪ್ರತಿಷ್ಠಿತ ಕೊಲಂಬಿಯ ವಿವಿಯ ಸ್ಕೂಲ್ ಆಫ್ ಇಂಟರ್‌ ನ್ಯಾಷನಲ್ ಆ್ಯಂಡ್ ಪಬ್ಲಿಕ್ ಅಫೇರ್ಸ್‌ ನಲ್ಲಿ ‘ಭಾರತೀಯ ಆರ್ಥಿಕ ನೀತಿ’ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು, ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕ್‌ಗಳಿಗೆ ಜೀವಸೆಲೆ ಒದಗಿಸುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಓರ್ವ ವಿದ್ವಾಂಸನಾಗಿ ರಾಜನ್‌ ಮೇಲೆ ತನಗೆ ಗೌರವವಿದೆ. ಆದರೆ ಭಾರತದ ಅರ್ಥವ್ಯವಸ್ಥೆ ಚೇತೋಹಾರಿಯಾಗಿದ್ದ ಸಂದರ್ಭ ಅವರಿಗೆ ಆರ್‌ಬಿಐ ನೇತೃತ್ವ ನೀಡಲಾಯಿತು. ಆದರೆ ಈ ಅವಧಿಯಲ್ಲಿ ಬ್ಯಾಂಕ್ ಸಾಲ ನೀಡಿಕೆ ವಿಷಯದಲ್ಲಿ ಗಂಭೀರ ಸಮಸ್ಯೆಗಳಿದ್ದವು. ರಾಜನ್ ಗವರ್ನರ್ ಆಗಿದ್ದಾಗ ಕೆಲವು ಆಪ್ತ ಮುಖಂಡರ ಫೋನ್ ಕರೆಯ ಆಧಾರದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಸಾಲ ನೀಡಬೇಕಿತ್ತು. ಇದರ ಪರಿಣಾಮ, ಈಗಲೂ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಆ ರಾಡಿಯಿಂದ ಹೊರಬರಲು ಸರಕಾರದ ಬಂಡವಾಳ ಪೂರೈಕೆ ಉಪಕ್ರಮವನ್ನು ಎದುರು ನೋಡುತ್ತಿದೆ ಎಂದರು.

ಆಗ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಸ್ಥಿರ, ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರಬೇಕಿತ್ತು ಎಂಬ ಅಭಿಪ್ರಾಯವನ್ನು ರಾಜನ್ ಕೂಡಾ ಒಪ್ಪುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಸಭಿಕರ ನಗೆಯ ಅಲೆಗಳ ಮಧ್ಯೆ ನಿರ್ಮಲಾ ಹೇಳಿದರು. ಎಲ್ಲರ ಬಗ್ಗೆಯೂ ತನಗೆ ಗೌರವವಿದ್ದು ಯಾರ ಬಗ್ಗೆಯೂ ತಾನು ಲೇವಡಿ ಮಾಡುತ್ತಿಲ್ಲ. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಆರ್‌ಬಿಐ ಗವರ್ನರ್ ರಾಜನ್ ಅವರ ಜುಗಲ್‌ಬಂದಿಯ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಆದರೆ ನಮಗ್ಯಾರಿಗೂ ಇದು ತಿಳಿದಿರಲಿಲ್ಲ ಎಂದವರು ಹೇಳಿದರು.

“ಅರ್ಥಶಾಸ್ತ್ರಜ್ಞರು ಈಗಿನ ಅರ್ಥವ್ಯವಸ್ಥೆ, ಈ ಹಿಂದಿನ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸುತ್ತಾರೆ. ಆದರೆ ರಾಜನ್ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸಂದರ್ಭದ ಕುರಿತೂ ನಾನು ಉತ್ತರಿಸಬೇಕಿದೆ. ರಾಜನ್ ನೇತೃತ್ವದ ಅವಧಿಯಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ ಜೀವಸೆಲೆ ಒದಗಿಸುವುದು ಭಾರತದ ವಿತ್ತ ಸಚಿವೆಯಾಗಿ ತನ್ನ ಪ್ರಥಮ ಕರ್ತವ್ಯವಾಗಿದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

 ಬ್ರೌನ್ ವಿವಿಯಲ್ಲಿ ಇತ್ತೀಚೆಗೆ ಉಪನ್ಯಾಸ ನೀಡಿದ್ದ ರಾಜನ್, ನರೇಂದ್ರ ಮೋದಿ ಸರಕಾರದ ಪ್ರಥಮ ಅವಧಿಯಲ್ಲಿ ಆಡಳಿತ ಕೇಂದ್ರೀಕೃತವಾಗಿದ್ದರಿಂದ ಮತ್ತು ನಾಯಕತ್ವಕ್ಕೆ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಹೇಗೆಂಬ ಸ್ಥಿರ, ಸ್ಪಷ್ಟ ದೃಷ್ಟಿಕೋನದ ಕೊರತೆ ಇದ್ದುದರಿಂದ ಅರ್ಥವ್ಯವಸ್ಥೆಯ ಒಳಿತಿಗೆ ಏನನ್ನೂ ಮಾಡಲು ಆಗಲಿಲ್ಲ ಎಂದು ಹೇಳಿದ್ದರು.

ಇದನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್, ತಮ್ಮ ಅವಧಿಯಲ್ಲಿ ಅತ್ಯಂತ ಪ್ರಜಾಪ್ರಭುತ್ವದ ವ್ಯವಸ್ಥೆಯಿತ್ತು ಎಂದು ಹೇಳಿಕೊಳ್ಳುತ್ತಿರುವ ನಾಯಕರ ಅವಧಿಯಲ್ಲೇ ದೇಶದ ಎಲ್ಲಾ ಬೃಹತ್ ಹಗರಣ ನಡೆದಿದೆ. ಯಾವುದೇ ಸಚಿವ ಸಂಪುಟದಲ್ಲಿ ಪ್ರಧಾನಿ ಸಮಾನರಲ್ಲಿ ಪ್ರಥಮ ಸ್ಥಾನದಲ್ಲಿರುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಪರಿಣಾಮಕಾರಿ ನಾಯಕತ್ವದ ಅಗತ್ಯವಿದೆ. ಬಹುಷಃ ಹಲವು ಉದಾರವಾದಿಗಳ ಮೆಚ್ಚುಗೆ ಪಡೆದ ಅತೀ ಪ್ರಜಾಪ್ರಭುತ್ವ ನಾಯಕತ್ವ ಈಗ ಬೆಳಕಿಗೆ ಬರುತ್ತಿರುವ ಭಾರೀ ಭ್ರಷ್ಟಾಚಾರ ಹಗರಣಗಳನ್ನು ನಮಗೆ ಉಳಿಸಿಹೋಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪಣಗರಿಯ, ಪ್ರೊಫೆಸರ್ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ, ನ್ಯೂಯಾರ್ಕ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಸಂದೀಪ್ ಚಕ್ರವರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News