3 ಕೋಟಿ ಫಾಲೋವರ್ ಗಳಿರುವ ಪ್ರಸಿದ್ಧ ಮೀಮ್ ಪೇಜ್ ನಲ್ಲಿ 'ಮಿಂಚಿದ' ಪಂಪ್ ವೆಲ್ ಫ್ಲೈ ಓವರ್!

Update: 2019-10-16 10:30 GMT

ಮಂಗಳೂರಿನ 'ಪ್ರಸಿದ್ಧ' ಪಂಪ್ ವೆಲ್ ಫ್ಲೈ ಓವರ್ ಮೀಮ್ ಪೇಜ್ ಗಳಿಗೆ ಆಹಾರವಾಗುತ್ತಿರುವುದು ಇದೇ ಮೊದಲೇನಲ್ಲ. ಸುಮಾರು 9 ವರ್ಷಗಳಿಂದ 'ಕಾಮಗಾರಿ ಪ್ರಗತಿಯಲ್ಲಿರುವ' ಈ ಫ್ಲೈ ಓವರ್ ಡಿ.31ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು.

600 ಮೀಟರ್ ಉದ್ದ ಹಾಗೂ, 20 ಮೀಟರ್ ಅಗಲದ ಈ ಸೇತುವೆಗೆ 2010ರಲ್ಲಿ ಚಾಲನೆ ದೊರಕಿತ್ತು. ಆರು ವರ್ಷಗಳ ಕಾಲ ನಿಧಾನಗತಿಯಿಂದ ಕೆಲಸ ನಡೆದು ಭಾರೀ ಟೀಕೆಗೆ ಗುರಿಯಾಗಿತ್ತು. 2019ರ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ನವಯುಗ್ ಸಂಸ್ಥೆಗೆ ಒತ್ತಡ ಹೇರಿದ್ದರು. ಫೆಬ್ರವರಿಯಲ್ಲಿ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ ಹೇಳಿಕೆ ನೀಡಿದ್ದರು. ಆದರೆ ಜನವರಿ ಕಳೆದು ಅಕ್ಟೋಬರ್ ತಲುಪಿದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.

ಇದೇ ಕಾರಣಕ್ಕಾಗಿ ಪಂಪ್‌ ವೆಲ್ ಫ್ಲೈ ಓವರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಗೊಳಗಾಗುತ್ತಿದೆ. ಫೇಸ್ ಬುಕ್ ನ ಪ್ರಸಿದ್ಧ ಮೀಮ್ ಪೇಜ್ ಆದ, 3 ಕೋಟಿಗೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ Sarcasm ಇದೀಗ ತನ್ನ ಮೀಮ್ ಒಂದಕ್ಕೆ ಪಂಪ್ ವೆಲ್ ಫ್ಲೈ ಓವರ್ ಫೋಟೊ ಬಳಸಿದೆ.

ಇತರ ದೇಶಗಳ ರಸ್ತೆಗಳು ಎಂದು ಸುಸಜ್ಜಿತ ರಸ್ತೆಗಳ ಫೋಟೊ ಹಾಕಿದ್ದರೆ, ನನ್ನ ದೇಶದ ರಸ್ತೆ ಎಂದು ಬರೆದು 'ಕಾಮಗಾರಿ ಪ್ರಗತಿಯಲ್ಲಿರುವ' ಪಂಪ್ ವೆಲ್ ಫ್ಲೈ ಓವರ್ ಫೋಟೊ ಹಾಕಲಾಗಿದೆ. Sarcasm ದೇಶದ ಪ್ರಸಿದ್ಧ ಮೀಮ್ ಪೇಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ. Sarcasm ಹಾಕಿರುವ ಈ ಪೋಸ್ಟ್ 659 ಬಾರಿ ಶೇರ್ ಆಗಿದ್ದು, 15 ಸಾವಿರ ಜನರು ಲೈಕ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News