ಜಮ್ಮು ಕಾಶ್ಮೀರದ ಮೇಲಿನ ನಿರ್ಬಂಧ ವಿರೋಧಿಸಿ ಅ.19ರಂದು ವಿಶಿಷ್ಟ ಪ್ರತಿಭಟನೆಗೆ ಕಣ್ಣನ್ ಗೋಪಿನಾಥನ್ ಕರೆ

Update: 2019-10-16 10:26 GMT

ಹೊಸದಿಲ್ಲಿ, ಅ.16: ಜಮ್ಮು ಕಾಶ್ಮೀರದ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸಿರುವುದನ್ನು ವಿರೋಧಿಸಿ ಆಗಸ್ಟ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್  370ನೇ ವಿಧಿ ರದ್ದುಗೊಂಡು ಎರಡು ತಿಂಗಳ ನಂತರವೂ ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸದೇ ಇರುವ ಕುರಿತಂತೆ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಮಂಗಳವಾರ ಟ್ವೀಟ್ ಮಾಡಿದ ಅವರು ನಾಗರಿಕರು ತಮ್ಮ ಪ್ರತಿಭಟನೆಯ ದ್ಯೋತಕವಾಗಿ ತಮ್ಮ ಬಾಯಿಗಳಿಗೆ ಟೇಪ್ ಹಚ್ಚಬೇಕೆಂದು ಹೇಳಿ ಸ್ವತಃ ಬಾಯಿಗೆ ಕಪ್ಪು ಟೇಪ್ ಹಚ್ಚಿದ ಫೋಟೋ ಪೋಸ್ಟ್ ಮಾಡಿದ್ದಾರೆ.

"ನಮ್ಮ ದೇಶದಲ್ಲಿ ಒಂದು ಪ್ರಾಂತ್ಯದ ಇಡೀ ಜನಸಂಖ್ಯೆಯನ್ನು 70 ದಿನಗಳ ಕಾಲ ನಿರ್ಬಂಧದಲ್ಲಿರಿಸಲಾಗಿದೆ. 69 ದಿನಗಳ ನಂತರ ಮೂಲಭೂತ ಮೊಬೈಲ್ ಸಂಪರ್ಕಗಳನ್ನು ಭಾಗಶಃ ಪುನರ್ ಸ್ಥಾಪಿಸಲಾಗಿದೆ. ಇದಕ್ಕೆಲ್ಲಾ ನಾವು ಮೌನ ಪ್ರೇಕ್ಷಕರಾಗಿರಬೇಕಾದರೆ, ಅದು ಸರಿಯಾದ ರೀತಿಯಲ್ಲಿಯೇ ಇರಲಿ'' ಎಂದು ಗೋಪಿನಾಥನ್ ಟ್ವೀಟ್ ಮಾಡಿದ್ದಾರೆ.

"ನಮ್ಮ ಸಹ ನಾಗರಿಕರ ಜತೆಗೆ ನಿಲ್ಲಬೇಕೆಂದು ಅನಿಸುವವರೆಲ್ಲರೂ ಈ ನಿರ್ಬಂಧಗಳ 75ನೇ ದಿನವಾದ ಅಕ್ಟೋಬರ್ 19ರಂದು  75 ನಿಮಿಷಗಳ ಕಾಲ ಅಥವಾ ನಮಗೆ ಸಾಧ್ಯವಾದಷ್ಟು ಸಮಯ ಬಾಯಿಗೆ ಟೇಪ್ ಹಚ್ಚಿ ಯಾವುದಾದರೂ ಸ್ಥಳದಲ್ಲಿ ಜತೆಗೂಡಿ ಇಲ್ಲವೇ ಖಾಸಗಿಯಾಗಿ  ಈ ರೀತಿ ಮಾಡಬಹುದು. ಕನಿಷ್ಠ ಹತ್ತಾದರೂ ಕಾಳಜಿ ಹೊಂದಿದ ನಾಗರಿಕರಿದ್ದಾರೆಯೇ?'' ಎಂದು ಟ್ವೀಟ್ ಮಾಡಿ ಜತೆಗೆ #ShutMyMouthToo #RegainYourVoice ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

"ಜೀವಗಳನ್ನು ಉಳಿಸಲು ಇಂತಹ ಕ್ರಮವನ್ನು ಅಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಹೇಳುವವರಿಗೆಲ್ಲಾ ನಾನು ಇದನ್ನು ಹೇಳಬಯಸುತ್ತೇನೆ. ತನ್ನ ಜನರಿಗೆ ಜೀವನ ಮತ್ತು ಸ್ವಾತಂತ್ರ್ಯವಿರುವಂತೆ ನೋಡಿಕೊಳ್ಳಲು ಸಾಧ್ಯವಾಗದ ಸರಕಾರ ಅಸಮರ್ಥವಾಗಿದೆ ಹಾಗೂ ಆಡಳಿತ ನಡೆಸಲು ಅನರ್ಹವಾಗಿದೆ. ಅವರು ತಮ್ಮ ವಾದ ಮಂಡಿಸುವ ಬದಲು ರಾಜೀನಾಮೆ ನೀಡುವುದು ಒಳ್ಳೆಯದು" ಎಂದು ಗೋಪಿನಾಥನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News