ಬಾಗೇಪಲ್ಲಿ: ಗ್ರಾಮೀಣ ಪ್ರದೇಶದಲ್ಲಿ ಬದಲಾದ ಹವಾಮಾನ; ಹೆಚ್ಚಿದ ವೈರಲ್ ಜ್ವರ

Update: 2019-10-16 12:19 GMT

ಬಾಗೇಪಲ್ಲಿ/ಚೇಳೂರು: ಕಳೆದ ಹಲವು ದಿನಗಳಿಂದ ಚೇಳೂರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗುತ್ತಿದ್ದು, ಈ ಮಳೆ ನೀರು ಚರಂಡಿ, ಗುಂಡಿಗಳು, ತಿಪ್ಪೆ ಗುಂಡಿಗಳಲ್ಲಿ ಶೇಖರಣೆಯಾಗಿ ಸೊಳ್ಳೆಗಳ ವಾಸಸ್ಥಾನವಾಗಿದ್ದು, ದಿನದಿಂದ ದಿನಕ್ಕೆ ಜನರಿಗೆ ವಿವಿಧ ಜ್ವರಗಳು ಹರಡುತ್ತಿರುವ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಬೀಳುವ ಮಳೆ ನೀರು ಚರಂಡಿ ತಿಪ್ಪೆ ಗುಂಡಿಗಳಿಗೆ ಸೇರಿ ಕಲುಷಿತಮಯವಾಗಿ ವಿವಿಧ ಖಾಯಿಲೆಗಳಿಗೆ ಜನ ಬಲಿಯಾಗುತ್ತಿದ್ದಾರೆ.  ಅವೈಜ್ಞಾನಿಕ ಹಾಗೂ ಕಳೆಪ ಮಟ್ಟದಲ್ಲಿ ನಿರ್ಮಿಸಿರುವ ಚರಂಡಿಗಳಲ್ಲಿ ಮಳೆಯ ನೀರು ಶೇಖರಣೆ ಆಗುತ್ತಿದ್ದು, ಜನರಿಗೆ ಜ್ವರ, ಮೈ-ಕೈಗಳು, ಕೀಲು ನೋವುಗಳು ಹೆಚ್ಚಾಗುತ್ತಿದೆ. ಕಲುಷಿತ ನೀರಿನ ಸೇವನೆಯಿಂದ ವಾಂತಿ, ಭೇದಿ, ಆಗುತ್ತಿದೆ.

ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಟೈಪಾಯ್ಡ್, ಡೆಂಗ್, ಚಿಕುನ್ ಗೂನ್ಯಾದಂತಹ ರೋಗಗಳು ಹರಡುತ್ತಿವೆ. ಸಾರ್ವಜನಿಕ ಹಾಗೂ ಖಾಸಗಿ ಚಿಕಿತ್ಸಾ ಘಟಕಗಳಲ್ಲಿ ಸರತಿ ಸಾಲಿನಲ್ಲಿ ಜನರು ಚಿಕಿತ್ಸೆ ಪಡೆಯಲು ಸಾಲುಗಟ್ಟುತ್ತಿದ್ದಾರೆ. ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರೋಗಿಗಳು ಹೋದರೂ  ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಇದರಿಂದಾಗಿ ಪಟ್ಟಣದ ಹೊರವಲಯದ ಆಂದ್ರ ಗಡಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿ ದಿನ ಅತ್ಯಧಿಕ ಸಂಖ್ಯೆಯಲ್ಲಿ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

"ಸರ್ಕಾರಗಳಿಂದ ಸ್ವಚ್ಛತೆಗಾಗಿ ಪಂಚಾಯತ್ ಗಳಿಗೆ, ಆರೋಗ್ಯ ಇಲಾಖೆಗಳಿಗೆ ಕೋಟ್ಯಾಂತರ ರೂ. ವ್ಯಯ ಮಾಡುತ್ತಿದೆ. ಸ್ವಚ್ಛ ಭಾರತ್ ಅಭಿಯಾನ ನಡೆಯುತ್ತಿದೆ. ಆದರೆ ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿ ಚರಂಡಿಗಳು ಸಮರ್ಪಕವಾಗಿಲ್ಲ. ಮಳೆ, ಚರಂಡಿ ನೀರು ರಸ್ತೆಗಳಿಗೆ ಹರಿಯುತ್ತಿದೆ. ಅಧಿಕಾರಿಗಳು ಸ್ವಚ್ಛ ಮಾಡಿಸಬೇಕು. ಮನೆ, ಚರಂಡಿ ಸೇರಿದಂತೆ ಸುತ್ತ ಮುತ್ತಲಿನ ಪರಿಸರವನ್ನು ಪ್ರತಿಯೊಬ್ಬರು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಪರಿಸರವಾದಿ ಜೆ.ಎನ್.ಜಾಲಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News