ನನಗೆ ದೇಶದಲ್ಲೇ ಹುದ್ದೆ ಸಿಕ್ಕರೆ ಒಳ್ಳೆಯದು: ಶಾಸಕ ಉಮೇಶ್ ಕತ್ತಿ

Update: 2019-10-16 12:22 GMT

ಬೆಳಗಾವಿ, ಅ. 16: ‘ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ. ಹೀಗಿರುವಾಗ ನನಗೆ ಯಾವ ದೊಡ್ಡ ಹುದ್ದೆ ನೀಡುವರೋ ಗೊತ್ತಿಲ್ಲ. ಅದು ದೇಶದ ಒಳಗೆ ಇದ್ದರೆ ಒಳ್ಳೆಯದು’ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಸಿಎಂ ಬಿಎಸ್‌ವೈ ಅವರೊಂದಿಗೆ ಸಮಾಲೋಚನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ನನಗೆ ಯಾವ ಹುದ್ದೆ ನೀಡುತ್ತಾರೆಂಬುದು ನನಗೆ ಗೊತ್ತಿಲ್ಲ ಎಂದರು.

‘ಡಿಸೆಂಬರ್ ವರೆಗೆ ಕಾಯಿರಿ’ ಎಂದು ನನಗೆ ಸಿಎಂ ಸೂಚಿಸಿದ್ದಾರೆ. ಆದರೆ, ಅವರು ನೀಡುವ ಹುದ್ದೆ ಅಮೆರಿಕಾ ಸೇರಿದಂತೆ ವಿದೇಶದಲ್ಲಿ ಇರಬಾರದು ಅಷ್ಟೇ ಎಂದು ಟೀಕಿಸಿದ ಅವರು, ನನಗೂ ಸಚಿವನಾಗುವ ಯೋಗ್ಯತೆ ಇದೆ. ಇದಕ್ಕಾಗಿ ಯಾರ ಜೊತೆಗೂ ಮನಸ್ತಾಪವಿಲ್ಲ’ ಎಂದು ನುಡಿದರು.

ಅವಕಾಶ ಸಿಕ್ಕರೆ ಉಮೇಶ ಕತ್ತಿ ಸಿಎಂ ಆಗಲಿದ್ದಾರೆಂಬ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ಆ ಅಧಿಕಾರ ಸಿಗಲು ಹಣೆಯಲ್ಲಿ ಬರೆದಿರಬೇಕು. ಅವಕಾಶ ಸಿಕ್ಕರೆ ನಾನೂ ಸಿಎಂ ಆಗಲು ಸಿದ್ಧನಿದ್ದೇನೆ ಎಂದು ಹೇಳಿದರು.

‘ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯವನ್ನು ಸಿಎಂ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ನನಗೆ ಯಾವುದೇ ಕ್ಷೇತ್ರದ ಉಸ್ತುವಾರಿ ನೀಡಿಲ್ಲ. ಏನೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ’ ಎಂದು ಉಮೇಶ್ ಕತ್ತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News