ವಸತಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಸಹಿಸಲ್ಲ: ಸಚಿವ ವಿ.ಸೋಮಣ್ಣ ಎಚ್ಚರಿಕೆ

Update: 2019-10-16 12:24 GMT

ಬೆಂಗಳೂರು, ಅ.16: ಬಡವರಿಗಾಗಿ ನಿರ್ಮಿಸುತ್ತಿರುವ ವಸತಿಗಳ ಯೋಜನೆ ಅನುಷ್ಠಾನದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.

ರಾಜೀವ್‌ ಗಾಂಧಿ ವಸತಿ ನಿಗಮದಿಂದ ಬೆಂಗಳೂರಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ, ಬಳ್ಳಾರಿ ನಗರದಲ್ಲಿನ ವಸತಿ ಯೋಜನೆ ಹಾಗೂ ಇನ್ನಿತರ ವಸತಿ ಯೋಜನೆಗಳ ಅನುಷ್ಠಾನ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಅವರು ಸಭೆ ನಡೆಸಿದರು.

ಕೇಂದ್ರ ಸರಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ರಾಜ್ಯ ಸರಕಾರದ ಅನುದಾನದ ಜೊತೆಗೆ ಫಲಾನುಭವಿಗಳ ವಂತಿಕೆಯನ್ನು ಸಂಗ್ರಹಿಸುವ ಬಗ್ಗೆ ಸಾಕಷ್ಟು ಸಲಹೆ, ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.

ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗಳ ಅನುಷ್ಠಾನ ಕುರಿತಂತೆ ವಿವರವಾಗಿ ಚರ್ಚಿಸಲಾಯಿತು. ಕಟ್ಟಡದ ಭದ್ರತೆಯನ್ನು ಪರಿಶೀಲಿಸಲು ಮುಂಬೈನ ಐಐಟಿಯನ್ನು ಥರ್ಡ್ ಪಾರ್ಟಿ ಸಂಸ್ಥೆಯಾಗಿ ನೇಮಿಸಿದ್ದು, ಕಟ್ಟಡಗಳ ವಿನ್ಯಾಸವನ್ನು ಪರಿಶೀಲಿಸಿ ಖಾತ್ರಿಪಡಿಸಲಾಗುವುದು. ಈ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ-ಎಎಚ್‌ಪಿ ಅಡಿಯಲ್ಲಿ ಕೈಗೊಂಡಿರುವ ಮುಂಡ್ರಿಗಿ ಆಶ್ರಯ ಮಹಾತ್ಮಗಾಂಧಿ ಟೌನ್‌ಶಿಪ್, ಜಿ+2 ಮಾದರಿಯ 5616 ಮನೆಗಳ ನಿರ್ಮಾಣ ಯೋಜನೆಯನ್ನು 338.25 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಈ ಕಾಮಗಾರಿಗಳ ಬಗ್ಗೆಯೂ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಈ ಕಾಮಗಾರಿಯನ್ನು ಸೆ.20ರಂದು ಪ್ರಾರಂಭಿಸಲಾಗಿದ್ದು, ನಿಗದಿತ 24 ತಿಂಗಳ ಅವಧಿಯೊಳಗೆ ಕಾಮಗಾರಿಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ಪೂರ್ಣಗೊಳಿಸಲು ಸೋಮಣ್ಣ ಸೂಚಿಸಿದರು.

ಈ ಸಂದರ್ಭದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳು, ವಸತಿ ಇಲಾಖೆಯ ಕಾರ್ಯದರ್ಶಿಗಳು, ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News