ಏರ್ ಪೋರ್ಟ್ ಮಾದರಿಯಲ್ಲಿ ಸುಂದರ-ಸುಸಜ್ಜಿತ ರೈಲ್ವೇ ನಿಲ್ದಾಣ: ಕೇಂದ್ರ ರೈಲ್ವೇ ಸಚಿವ ಸುರೇಶ್ ಸಿ.ಅಂಗಡಿ

Update: 2019-10-17 13:43 GMT

ದಾವಣಗೆರೆ: ನಗರದಲ್ಲಿ ಏರ್ ಪೋರ್ಟ್ ಮಾದರಿಯಲ್ಲಿ ಸುಂದರ ಮತ್ತು ಸುಸಜ್ಜಿತವಾದ ರೈಲ್ವೇ ನಿಲ್ದಾಣ ನಿರ್ಮಿಸಲಾಗುವುದು ಎಂದು ಕೇಂದ್ರದ ರೈಲ್ವೇ ಸಚಿವ ಸುರೇಶ್ ಸಿ.ಅಂಗಡಿ ಹೇಳಿದರು. ಹೊಸಪೇಟೆ-ಕೊಟ್ಟೂರು ರೈಲ್ವೇ ಸಂಪರ್ಕಕ್ಕೆ ಚಾಲನೆ ನೀಡಿ, ದಾವಣಗೆರೆ ನಗರಕ್ಕೆ ಆಗಮಿಸಿ ರೈಲ್ವೇ ನಿಲ್ದಾಣ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.

ರೈಲ್ವೇ ಸೇವೆಯು ಜನ ಸಾಮಾನ್ಯರ, ಬಡವರ, ರೈತರು, ವಿದ್ಯಾರ್ಥಿಗಳ ಲೈಫ್‍ಲೈನ್ ಆಗಿದೆ. ಸೇವಾ ಸರ್ವಿಸ್ ಎಂಬ ಸೇವೆಯನ್ನು ಯಶವಂತಪುರ, ತುಮಕೂರಗಳಲ್ಲಿ ನೀಡಲಾಗಿದೆ. ಸಣ್ಣ ಸಣ್ಣ ಹಳ್ಳಿ, ಪಟ್ಟಣಗಳಿಂದ, ತಾಲ್ಲೂಕುಗಳಿಂದ ದೊಡ್ಡ ನಗರಗಳಿಗೆ ರೈಲ್ವೇ ಸಂಪರ್ಕ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಅನೇಕ ಹಿರಿಯರು, ಜನಪ್ರತಿನಿಧಿಗಳು, ರೈಲ್ವೇ ಹೋರಾಟಗಾರರು ಕಳೆದ 25 ವರ್ಷಗಳಿಂದ ನಡೆಸಿದ ಸತತ ಪ್ರಯತ್ನದಿಂದ ಇಂದು ಹೊಸಪೇಟೆ ಕೊಟ್ಟೂರು ರೈಲ್ವೇ ಸಂಪರ್ಕಕ್ಕೆ ಚಾಲನೆ ದೊರೆತು, ಜನಸಾಮಾನ್ಯರಿಗೆ ಅನುಕೂಲಕರವಾಗಿದೆ. 

ರೈಲ್ವೇ ಇಲಾಖೆಯಿಂದ ಸುರಕ್ಷತೆ, ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು., ರಾಜ್ಯದಲ್ಲಿ ಬರುವ 10 ವರ್ಷದಲ್ಲಿ 50 ಲಕ್ಷ ಕೋಟಿ ಅನುದಾನ ಖರ್ಚು ಮಾಡಿ ಉತ್ತಮ ಅಭಿವೃದ್ಧಿ ಮಾಡಲಾಗುವುದು ಎಂದರು.

ನಗರದಲ್ಲಿ ಅವಶ್ಯವಿರುವೆಡೆ ಜನರಿಗೆ ಅನುಕೂಲಕರವಾಗುವಂತೆ ರೈಲ್ವೆ ಓವರ್‍ಬ್ರಿಡ್ಜ್, ಟ್ರಾಫಿಕ್ ಮುಕ್ತಗೊಳಿಸುವ ಕೆಲಸ ಆಗುತ್ತಿದೆ. ನಗರದ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ರೈಲ್ವೇ ಜಿಎಂ ಎ.ಕೆ.ಸಿಂಗ್ ಮತ್ತು ಮೈಸೂರಿನ ಡಿಆರ್‍ಎಂ ಅಪರ್ಣ ಇವರು ನಕ್ಷೆ ತಯಾರಿಸಿದ್ದಾರೆ. ಕೆಲಸ ತೀವ್ರ ಗತಿಯಲ್ಲಿ ನಡೆಯುತ್ತಿದೆ. ಸಂಸದರಾದ ಜಿ.ಎಂ.ಸಿದ್ದೇಶ್‍ರವರು ಕೂಡ ಕಾಳಜಿಯಿಂದ ನಿರ್ಮಾಣದ ನಿಗಾ ವಹಿಸುತ್ತಿದ್ದಾರೆ. ರೈಲ್ವೇ ಇಲಾಖೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಪರಿಹಾರಕ್ಕೆ ಸಂಪೂರ್ಣ ಸಹಕಾರ ಹಾಗೂ ಜನರಿಗೆ ಎಲ್ಲ ರೀತಿಯ ಸವಲತ್ತು ನೀಡಲಾಗುವುದು.

ಅಗತ್ಯ ಮತ್ತು ಬೇಡಿಕೆ ಇರುವೆಡೆ ರೈಲ್ವೇ ನಿಲ್ದಾಣಗಳ ಉನ್ನತೀಕರಣ ಮಾಡಲಾಗುವುದು. ದಾವಣಗೆರೆ ರೈಲ್ವೇ ಸ್ಟೇಷನ್‍ನ್ನು ಏರ್ ಪೋರ್ಟ್ ರೀತಿಯಲ್ಲಿ ಸುಂದರವಾಗಿ ನಿಲ್ದಾಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಸಂಪರ್ಕಕ್ಕೆ ಭೂಸ್ವಾಧೀನ ಸಮಸ್ಯೆ ಇದ್ದು, ಮುಖ್ಯಮಂತ್ರಿಗಳು, ಸಂಸದರೊಂದಿಗೆ ಮಾತುಕತೆ ಮಾಡಲಾಗಿದೆ. ಭೂಮಿ ಮಂಜೂರಾದರೆ ಕೆಲಸ ಶುರು ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಸಂಸದರಾದ ಜಿ.ಎಂ.ಸಿದ್ದೇಶ್ವರ,ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ,  ಶಾಸಕ  ಎಸ್.ಎ.ರವೀಂದ್ರನಾಥ್, ಮೈಸೂರು ರೈಲ್ವೇ ಡಿಆರ್‍ಎಂ ಅಪರ್ಣಾ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಇತರೆ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News