ಖಾತೆ ಬದಲಾವಣೆ : ‘ಪಟ್ಟೆದಾರರ ಆಂದೋಲನ’ ಆಯೋಜಿಸಲು ಸಚಿವ ಆರ್.ಅಶೋಕ ಸೂಚನೆ

Update: 2019-10-17 13:56 GMT

ಮಡಿಕೇರಿ ಅ.17 :ಹಲವು ವರ್ಷಗಳಿಂದ ಪಟ್ಟೆದಾರರ ಹೆಸರಿನಲ್ಲಿರುವ ಆರ್‍ಟಿಸಿಯನ್ನು ವಾರಸುದಾರರ ಹೆಸರಿಗೆ ಖಾತೆ ಮಾಡಲು ‘ಆಂದೋಲನ’ ಮಾದರಿಯಲ್ಲಿ ಕಾರ್ಯಕ್ರಮ ಆರಂಭಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಂದಾಯ ಸಚಿವರಾದ ಆರ್.ಅಶೋಕ ಅವರು ತಿಳಿಸಿದ್ದಾರೆ. 

ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರ ಉಪಸ್ಥಿತಿಯಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಸಚಿವರು ಸಲಹೆ ಮಾಡಿದರು.  

ಖಾತೆ ಬದಲಾವಣೆ ಸಂಬಂಧಿಸಿದಂತೆ ಸಮಸ್ಯೆ ಇರುವುದನ್ನು ಒಂದು ಕಡೆ ಮಾಡಿ, ಸಮಸ್ಯೆ ಇಲ್ಲದಿರುವ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಸಮಸ್ಯೆ ಇದೆ ಎಂದು ಎಲ್ಲಾ ಕಡತಗಳನ್ನು ಬದಿಗೆ ಸರಿಸುವುದು ಸರಿಯಲ್ಲ. ಆದ್ದರಿಂದ ಈ ಬಗ್ಗೆ ವ್ಯಾಪಕ ಮಾಹಿತಿ ನೀಡಿ, ಸಮರೋಪಾದಿಯಲ್ಲಿ ಖಾತೆ ಬದಲಾವಣೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಯವರಿಗೆ ಕಂದಾಯ ಸಚಿವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಅಜ್ಜ ತಾತಂದಿರ ಹೆಸರಿನಿಂದ ಮಕ್ಕಳಿಗೆ ಖಾತೆ ಬದಲಾವಣೆ ಆಗದಿರುವುದರಿಂದ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ಖಾತೆ ಬದಲಾವಣೆ ಆಂದೋಲನವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದರು.  

ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು  ಖಾತೆ ಬದಲಾವಣೆ ಸಂಬಂಧಿಸಿದಂತೆ ಪಟ್ಟೆದಾರರ ಆಂದೋಲನ ಹಮ್ಮಿಕೊಂಡಲ್ಲಿ ಇಲ್ಲಿನ ಜನರಿಗೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪ್ರಥಮ ಆದ್ಯತೆ ನೀಡುವಂತಾಗಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. 

ಜಿಲ್ಲೆಯಲ್ಲಿನ ತೋಟಗಳಲ್ಲಿ ಮನೆ ನಿರ್ಮಿಸಲು ಹಾಗೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕಂದಾಯ ಸಚಿವರ ಗಮನಕ್ಕೆ ತಂದರು. 

ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪದಿಂದಾಗಿ ಕಾಫಿ, ಏಲಕ್ಕಿ, ಬಾಳೆ, ಕರಿಮೆಣಸು, ಹೀಗೆ ಹಲವು ಬೆಳೆಗಳು ಕೈಗೆಟುಕದೆ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ 20 ಸೆಂಟ್ ಮೇಲ್ಪಟ್ಟು ಜಾಗವನ್ನು ಮನೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವಂತಾಗಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಕಂದಾಯ ಸಚಿವರಲ್ಲಿ ಮನವಿ ಮಾಡಿದರು.

ಭೂ ಪರಿವರ್ತನೆಗೆ ಎನ್‍ಒಸಿ ಇದ್ದರೆ ಸಾಕು. ಆದರೆ ರಸ್ತೆ ಇಲ್ಲ ಎಂದು ಭೂ ಪರಿವರ್ತನೆ ಮಾಡುತ್ತಿಲ್ಲ. ಇದರಿಂದಾಗಿ ಸ್ಥಳೀಯರಿಗೆ ತುಂಬಾ ತೊಂದರೆಯಾಗಿದೆ ಎಂದು ಶಾಸಕರು ಗಮನ ಸೆಳೆದರು. 

ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭೂ ಪರಿವರ್ತನೆಗೆ ಅವಕಾಶ ಮಾಡಬೇಕು. ಇಲ್ಲದಿದ್ದರೆ ಇಲ್ಲಿನ ಜನರು ಬದುಕುವುದಾದರೂ ಹೇಗೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಹೇಳಿದರು. 

ಪ್ರಕೃತಿ ವಿಕೋಪದಿಂದಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತ್ವರಿತವಾಗಿ ಮನೆ ನಿರ್ಮಿಸಿಕೊಡಲು ಸರ್ಕಾರಿ ಜಮೀನು ಗುರುತಿಸುವುದು ಅಥವಾ ಭೂಮಿ ಖರೀದಿಸಿ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರು ನಿರ್ದೇಶನ ನೀಡಿದರು.  

ನದಿ ದಡದಲ್ಲಿ ವಾಸ ಮಾಡುತ್ತಿದ್ದವರು ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದು, ಇವರಿಗೆ ಪರ್ಯಾಯ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವಂತೆ ಸಚಿವರು ಸೂಚಿಸಿದರು.

ಹೋಂ ಸ್ಟೇಗಳ ನೋಂದಣಿ 

ಜಿಲ್ಲೆಯಲ್ಲಿ ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ಗ್ರಾ.ಪಂ.ವಾರು ಮಾಹಿತಿ ಸಂಗ್ರಹಿಸುವಂತೆ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಕಂದಾಯ ಸಚಿವರು ಸೂಚಿಸಿದರು. 
ಕಾನೂನು ಸುವ್ಯವಸ್ಥೆ ಮತ್ತು ರಕ್ಷಣೆ ಹಿತದೃಷ್ಟಿಯಿಂದ ಕಡ್ಡಾಯವಾಗಿ ಹೋಂ ಸ್ಟೇಗಳನ್ನು ನೋಂದಣಿ ಮಾಡಬೇಕು. ಆದ್ದರಿಂದ ಜಿಲ್ಲೆಯಲ್ಲಿ ಎಷ್ಟು ಹೋಂ ಸ್ಟೇಗಳಿವೆ ಎಂದು ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.

ಕೊಡಗು, ಚಿಕ್ಕಮಗಳೂರು, ಮೈಸೂರು, ಬಂಡೀಪುರ ಮತ್ತಿತರ ಕಡೆಗಳಲ್ಲಿರುವ ಹೋಂಸ್ಟೇ/ರೆಸಾರ್ಟ್‍ಗಳ ಸುರಕ್ಷತೆ ಸಂಬಂಧಿಸಿದಂತೆ ಹೆಚ್ಚಿನ ನಿಗಾವಹಿಸಬೇಕಿದೆ ಎಂದು ಸಚಿವರು ಹೇಳಿದರು.  
ತೆರಿಗೆ ಸಂಗ್ರಹದಿಂದ ಗ್ರಾ.ಪಂ.ಗಳಿಗೆ ಆದಾಯ ಬರಲಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು.  ತೆರಿಗೆ ಪಾವತಿಸದಿರುವ ಹೋಂ ಸ್ಟೇಗಳ ವಿದ್ಯುತ್ ಕಡಿತ ಮಾಡುವಂತೆ ಸಚಿವರು ನಿರ್ದೇಶನ ನೀಡಿದರು. ಕೋವಿ ಪರವಾನಗಿಯನ್ನು ಸಕಾಲದಲ್ಲಿ ನೀಡಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.  

ಜಿಲ್ಲಾಧಿಕಾರಿ ಕಚೇರಿಗೆ ದಿಢೀರ್ ಭೇಟಿ 

 ಕಂದಾಯ ಸಚಿವರಾದ ಆರ್.ಅಶೋಕ್ ಅವರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಸಾಮಾನ್ಯ ವಿಭಾಗಕ್ಕೆ ದಿಢೀರ್ ಭೇಟಿ ನೀಡಿ ಕಂದಾಯಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.   
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಾರ್ವಜನಿಕರ ಅಹವಾಲು ಆಲಿಸಿದ ಸಚಿವರು, ಜಿಲ್ಲಾಧಿಕಾರಿ ಕಚೇರಿಯಿಂದ ಯಾವ ಕೆಲಸ ಆಗಬೇಕಿದೆ. ಅರ್ಜಿ ಸಲ್ಲಿಸಿ ಎಷ್ಟು ದಿನವಾಗಿದೆ. ಸತಾಯಿಸುತ್ತಿದ್ದಾರೆಯೇ ಎಂದು ಸಚಿವರು ಸಾರ್ವಜನಿಕರನ್ನು ಪ್ರಶ್ನಿಸಿದರು. 

ಬಳಿಕ ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪ ವಿಭಾಗಾಧಿಕಾರಿ ಕಚೇರಿ, ಮಾಹಿತಿ ತಂತ್ರಜ್ಞಾನ ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.  
ಈ ಸಂದರ್ಭದಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ನಾನಾ ಇಲಾಖೆ ಅಧಿಕಾರಿಗಳು ಇದ್ದರು. ಬಳಿಕ ಕರ್ಣಂಗೇರಿಗೆ ಭೇಟಿ ನೀಡಿ, ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳನ್ನು ಪರಿಶೀಲಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News