ಮಂಡ್ಯ: ಪಿಂಚಣಿಗೆ ಒತ್ತಾಯಿಸಿ ಬಿಸಿಯೂಟ ನೌಕರರ ಧರಣಿ

Update: 2019-10-17 14:14 GMT

ಮಂಡ್ಯ, ಅ.17: ಪಿಂಚಣಿ ಸೌಲಭ್ಯ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರು ಗುರುವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಧರಣಿ ನಡೆಸಿ ಜಿಪಂ ಸಿಇಒ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರಕಾರ ಮತ್ತು ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಗಪಡಿಸಿದ ಅವರು, ವಿಶೇಷ ಪಿಂಚಣಿ ಯೋಜನೆಗೆ ಬದಲಾಗಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಗೆ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶವನ್ನು ವಿರೋಧಿಸಿದರು.

ಸತತ ಹೋರಾಟದ ಬಳಿಕ ನೌಕರರ ವೇತನದಲ್ಲಿ 100 ರೂ. ಮತ್ತು ಸರಕಾರದಿಂದ 100 ರೂ. ಸೇರಿಸಿ ಈ ಹಣವನ್ನು ಎಲ್‍ಐಸಿ ಮುಖಾಂತರ ಅಕ್ಷರ ದಾಸೋಹ ನೌಕರರಿಗೆ ವಿಶೇಷ ಪಿಂಚಣಿ ಯೋಜನೆಯನ್ನು ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಇದಕ್ಕೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದರು ಎಂದು ಅವರು ಹೇಳಿದರು.

ಸೆ.30ರ ನಂತರ ಈ ಕುರಿತು ಮಾತುಕತೆಗೆ ದಿನಾಂಕ ನಿಗದಿ ಮಾಡುವುದಾಗಿ ನೂತನ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರೂ ಒಪ್ಪಿಕೊಂಡಿದ್ದರು. ಆದರೆ, ಎಲ್ಲವೂ ಅಂತಿಮವಾಗುವ ಹಚಿತದಲ್ಲಿರುವಾಗ ಸರಕಾರವು ಬಿಸಿಯೂಟ ನೌಕರರನ್ನು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಪಿಂಚಣಿ ಯೋಜನೆಗೆ ಸೇರಿಸಿ ಆದೇಶ ಹೊರಡಿಸಿದೆ. ಈ ಆದೇಶ ನಮಗೆ ಆಘಾತ ಉಂಟುಮಾಡಿದೆ ಎಂದು ಅವರು ಕಿಡಿಕಾರಿದರು.

ಶಿಕ್ಷಣ ಇಲಾಖೆಯಡಿ ದುಡಿಯುತ್ತಿರುವ 1.18 ಲಕ್ಷ ನೌಕರರಿಗೆ ವಿಶೇಷವಾದ ಪಿಂಚಣಿ ಸೌಲಭ್ಯ ಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಮಾನ್-ಧನ್ ಯೋಜನೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ತಾಕೀತು ಮಾಡಿದರು.

ಕೂಡಲೇ ವಿಶೇಷ ಪಿಂಚಣಿ ಯೋಜನೆ ರೂಪಿಸುವುದರ ಜತೆಗೆ ಬಾಕಿ ವೇತನ, ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಡಿ.2 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಹೋರಾಟ ನಡೆಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಹದೇವಮ್ಮ, ಪ್ರಧಾನ ಕಾರ್ಯದರ್ಶಿ ಸುನೀತಾ, ಪುಟ್ಟಮ್ಮ, ಸುನಂದ, ವಿ.ಡಿ.ಮಂಜುಳ, ಯಶೋಧ, ಎಸ್.ಜಿ.ಸರಸ್ವತಿ, ಎಸ್.ಪಿ.ಶಾರದಮ್ಮ, ಇತರರು ಧರಣಿ ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News